ಬಲೂಚ್ ಕಾರ್ಯಕರ್ತೆ ಕರಿಮಾ ಬಲೂಚ್ ಕೆನಡಾದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಹೊಸದಿಲ್ಲಿ: ಕೆನಡಾದಲ್ಲಿ ಆಶ್ರಯ ಪಡೆಯಲು 2016ರಲ್ಲಿ ಪಾಕಿಸ್ತಾನದಿಂದ ಪಾರಾಗಿದ್ದ ಬಲೂಚ್ ಕಾರ್ಯಕರ್ತೆ ಕರಿಮಾ ಬಲೂಚ್ ಹಾರ್ಬರ್ ಫ್ರಂಟ್ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಟೊರೊಂಟೊದ ಲೇಕ್ಶೋರ್ ಬಳಿಯ ದ್ವೀಪವೊಂದರಲ್ಲಿ ಆಕೆಯ ಮೃತದೇಹ ಮುಳುಗಿರುವ ಸ್ಥಿತಿಯಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕರಿಮಾ ಅವರ ಪತಿ ಹಾಗೂ ಸಹೋದರರು ಮೃತದೇಹದ ಗುರುತನ್ನು ಪತ್ತೆ ಹಚ್ಚಿದ್ದು, ಮೃತದೇಹ ಈಗಲೂ ಪೊಲೀಸರ ಬಳಿ ಇದೆ.
ಟೊರೊಂಟೊ ಪೊಲೀಸ್ ಹಾಗೂ ಕೆನಡಾದ ಭದ್ರತಾ ಸಂಸ್ಥೆ ಸಿಎಸ್ಎಸ್ ಕರಿಮಾ ಸಾವಿನಲ್ಲಿ ಪಾಕಿಸ್ತಾನದ ಕೈವಾಡದ ಸಾಧ್ಯತೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಟೊರೊಂಟಾದ ತಾರೆಕ್ ಫತ್ಹಾ ‘ಇಂಡಿಯಾ ಟುಡೇ’ ಗೆ ತಿಳಿಸಿದ್ದಾರೆ.
ತನ್ನ ಜೀವಕ್ಕೆ ಅಪಾಯವಿದ್ದ ಕಾರಣ 2016ರಲ್ಲಿ ಕರಿಮಾ ತನ್ನ ಕೆಲವು ಸ್ನೇಹಿತರು ಹಾಗೂ ಬಲೂಚ್ ಕಾರ್ಯಕರ್ತರ ಸಹಾಯದಿಂದ ಬಲೂಚಿಸ್ತಾನದಿಂದ ತಪ್ಪಿಸಿಕೊಂಡಿದ್ದರು. ಪಾಕಿಸ್ತಾನ ಮಾಜಿ ಸೇನಾಧಿಕಾರಿಗಳು ಕೆನಡಾದಲ್ಲಿ ನೆಲೆಸಿದ್ದನ್ನು ಕರಿಮಾ ತೀವ್ರವಾಗಿ ಟೀಕಿಸುತ್ತಿದ್ದರು. ಪಾಕಿಸ್ತಾನ ವಶದಿಂದ ಬಲೂಚಿಸ್ತಾನವನ್ನು ಸ್ವತಂತ್ರಗೊಳಿಸಬೇಕೆಂದು ಪ್ರತಿಪಾದಿಸುತ್ತಿದ್ದವರಲ್ಲಿ ಕರಿಮಾ ಕೂಡ ಒಬ್ಬರಾಗಿದ್ದರು.
2016ರಲ್ಲಿ ಭಾರತದ ಪ್ರಧಾನಿ ಮೋದಿಯವರಿಗಾಗಿ ರಕ್ಷಾ ಬಂಧನ ಸಂದೇಶವನ್ನು ರೆಕಾರ್ಡ್ ಮಾಡಿದ್ದರು. 2016ರಲ್ಲಿ ಬ್ರಿಟನ್ ನ ಪ್ರಮುಖ ಪ್ರಸಾರ ಸಂಸ್ಥೆ ಬಿಬಿಸಿ ಆಯ್ಕೆ ಮಾಡಿರುವ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಕರಿಮಾ ಕೂಡ ಒಬ್ಬರಾಗಿದ್ದರು.
ಕರಿಮಾ ಬಲೂಚ್ ನಿಧನಕ್ಕೆ ಬಲೂಚ್ ರಾಷ್ಟ್ರೀಯ ಚಳುವಳಿಯು 40 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.