1992 ಸಿಸ್ಟರ್ ಅಭಯಾ ಕೊಲೆ ಪ್ರಕರಣ: ಪಾದ್ರಿ ಮತ್ತು ಭಗಿನಿಗೆ ಜೀವಾವಧಿ ಶಿಕ್ಷೆ
ತಿರುವನಂತಪುರಂ,ಡಿ.23: ಇಪ್ಪತ್ತೆಂಟು ವರ್ಷಗಳ ಹಿಂದೆ, 1992ರಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಭಗಿನಿ ಅಭಯಾ ಪ್ರಕರಣದಲ್ಲಿ ಆಕೆಯನ್ನು ಹತ್ಯೆಗೈದ ಅಪರಾಧಕ್ಕಾಗಿ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಫಾದರ್ ಥಾಮಸ್ ಕೊಟೂರ್ ಹಾಗೂ ಭಗಿನಿ ಸೆಫಿ ಅವರಿಗೆ ಜೀವಾವಧಿ ಶಿಕ್ಷೆ ಘೋಷಿಸಿದೆ. ಮಾರ್ಚ್ 1992ರಲ್ಲಿ ಭಗಿನಿ ಅಭಯಾ(19) ಕೇರಳದ ಕೊಟ್ಟಾಯಂನ ಪಾಯಸ್ ಎಕ್ಸ್ ಕಾನ್ವೆಂಟಿನ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.
ಇಬ್ಬರು ಅಪರಾಧಿಗಳಿಗೂ ಐಪಿಸಿ ಸೆಕ್ಷನ್ 302 ಅನ್ವಯ ಶಿಕ್ಷೆ ಪ್ರಕಟಿಸಲಾಗಿದೆ. ಮುಖ್ಯ ಆರೋಪಿ ಥಾಮಸ್ ಕೊಟೂರ್ ಎರಡು ಜೀವಾವಧಿ ಶಿಕ್ಷೆ ಅವಧಿ ಅನುಭವಿಸಬೇಕಿದೆ. ಒಂದು ಜೀವಾವಧಿ ಶಿಕ್ಷೆ ಕೊಲೆಗಾಗಿ ಹಾಗೂ ಇನ್ನೊಂದು ಕಾನ್ವೆಂಟ್‍ಗೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕೆ, ಆದರೆ ಎರಡೂ ಶಿಕ್ಷೆಯನ್ನು ಜತೆಯಾಗಿ ಅನುಭವಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಸಾಕ್ಷ್ಯ ನಾಶಕ್ಕಾಗಿ ಎರಡೂ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹೊರತಾಗಿ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು ತಲಾ ಐದು ಲಕ್ಷ ರೂ. ದಂಡ ಕೂಡ ಪಾವತಿಸಬೇಕಿದೆ. ಇಬ್ಬರನ್ನೂ ನ್ಯಾಯಾಲಯ ಮಂಗಳವಾರ ಅಪರಾಧಿ ಎಂದು ಘೋಷಿಸಿ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.
ತಾನು ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆಯುತ್ತಿರುವುದರಿಂದ ಕಡಿಮೆ ಶಿಕ್ಷೆ ನೀಡಬೇಕೆಂಬ ಥಾಮಸ್ ಕೊಟೂರ್ ಮಾಡಿದ ಮನವಿ ಹಾಗೂ ತನ್ನ ಶಿಕ್ಷೆ ಕಡಿಮೆಗೊಳಿಸುವಂತೆ ಭಗಿನಿ ಸೆಫಿ ಮಾಡಿದ ಮನವಿಗಳನ್ನು ನ್ಯಾಯಾಲಯ ಒಪ್ಪಿಲ್ಲ.
ಭಗಿನಿ ಅಭಯಾ ಮೃತದೇಹ ಬಾವಿಯಲ್ಲಿ ಪತ್ತೆಯಾದ ಆರಂಭದಲ್ಲಿ ಇದೊಂದು ಆತ್ಮಹತ್ಯೆ ಎಂದು ತಿಳಿಯಲಾಗಿತ್ತಾದರೂ ಸಿಬಿಐ ತನಿಖೆಯಿಂದ ಇದೊಂದು ಕೊಲೆ ಎಂದು ಕಂಡು ಬಂದಿತ್ತು. ನಸುಕಿನಲ್ಲಿ ಓದಲೆಂದು ಎದ್ದು ಮುಖ ತೊಳೆಯಲೆಂದು ಅಡುಗೆ ಮನೆಗೆ ಬಂದಿದ್ದ ಅಭಯಾ ಅಲ್ಲಿ ಓರ್ವ ಭಗಿನಿ ಹಾಗೂ ಇಬ್ಬರು ಪಾದ್ರಿಗಳನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದ್ದರು. ಇದನ್ನು ಆಕೆ ಬೇರೆಯವರಿಗೆ ಹೇಳಬಹುದು ಎಂಬ ಭಯದಿಂದ ಆಕೆಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ನಂತರ ಬಾವಿಗೆಸೆಯಲಾಗಿತ್ತು. ಆದರೆ ಚರ್ಚ್ ಮಾತ್ರ ಆರೋಪಿಗಳ ಬೆಂಬಲಕ್ಕೆ ನಿಂತು ಅವರು ನಿರಪರಾಧಿಗಳೆಂದೇ ಹೇಳಿಕೊಂಡಿತ್ತು.