×
Ad

ಸಂಜೀವನಿ ಸೊಸೈಟಿ ಹಗರಣ: ಕೇಂದ್ರ ಸಚಿವ ಶೇಖಾವತ್, ಪತ್ನಿಗೆ ರಾಜಸ್ಥಾನ ಹೈಕೋರ್ಟ್ ನೋಟಿಸ್

Update: 2020-12-23 22:05 IST

ಜೋಧ್‌ಪುರ, ಡಿ. 23: 900 ಕೋಟಿ ರೂಪಾಯಿಯ ಸಂಜೀವನಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಅವರ ಪತ್ನಿ ಹಾಗೂ ಇತರ 15 ಮಂದಿ ವಿರುದ್ಧ ರಾಜಸ್ಥಾನ ಉಚ್ಚ ನ್ಯಾಯಾಲಯ ನೋಟಿಸುಗಳನ್ನು ಜಾರಿ ಮಾಡಿದೆ.

ಸೊಸೈಟಿಯಲ್ಲಿ ಹೂಡಿಕೆ ಮಾಡಿದ ಜನರ ಸಂಘಟನೆ ‘ಸಂಜೀವನಿ ಪೀಡಿತ ಸಂಘ’ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ವಿಜಯ ವೈಷ್ಣೋಯಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನೋಟಿಸುಗಳನ್ನು ಜಾರಿ ಮಾಡಿದೆ. ನಕಲಿ ದಾಖಲೆಗಳು ಹಾಗೂ ಪೋಸ್ಟರ್‌ಗಳನ್ನು ಪ್ರದರ್ಶಿಸುವ ಮೂಲಕ ಶೇಖಾವತ್ ಸಹಿತ ಸೊಸೈಟಿಯ ಅಧ್ಯಕ್ಷ ವಿಕ್ರಮ್ ಸಿಂಗ್ ಹಾಗೂ ಇತರರು ಹೂಡಿಕೆದಾರರನ್ನು ವಂಚಿಸಿದ್ದಾರೆ ಎಂದು ದೂರುದಾರರ ಪರ ವಕೀಲ ಮಧುಸೂದನ್ ಪುರೋಹಿತ್ ಹೇಳಿದ್ದಾರೆ.

ಜೋಧ್‌ಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗುವುದಕ್ಕಿಂತ ಮುನ್ನ ಶೇಖಾವತ್ ಅವರು ಸೊಸೈಟಿಯ ಪಾಲುದಾರರಾಗಿದ್ದರು. 900 ಕೋಟಿ ರೂಪಾಯಿ ಕಳೆದುಕೊಂಡ ಸಾವಿರಾರು ಹೂಡಿಕೆದಾರರಿಗೆ ನ್ಯಾಯ ನೀಡುವಂತೆ ಕೋರಿ ಸೊಸೈಟಿಯ ಮಾಲಕರು, ಪಾಲುದಾರರು ಹಾಗೂ ಪದಾಧಿಕಾರಿಗಳ ವಿರುದ್ಧ ‘ಸಂಜೀವನಿ ಪೀಡಿತ ಸಂಘ’ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News