×
Ad

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಗೆ ಕೇಂದ್ರ ಸಂಪುಟದ ಅಸ್ತು

Update: 2020-12-23 22:32 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಡಿ.23: ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೈಗೆಟುಕುವಂತೆ ಮಾಡುವ ಪ್ರಯತ್ನವಾಗಿ ಮುಂದಿನ ಐದು ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳ ನಾಲ್ಕು ಕೋಟಿಗೂ ಅಧಿಕ ವಿದ್ಯಾರ್ಥಿಗಳಿಗಾಗಿ 59,000 ಕೋ.ರೂ.ವೆಚ್ಚದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಗೆ ಕೇಂದ್ರ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ. ಯೋಜನೆಯು 11ನೇ ತರಗತಿಯಿಂದ ಆರಂಭಿಸಿ ಮತ್ತು ಮುಂದಿನ ಶಿಕ್ಷಣಕ್ಕಾಗಿ ಯಾವುದೇ ಮೆಟ್ರಿಕ್ ನಂತರದ ಕೋರ್ಸ್‌ಗೆ ಸೇರಲು ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಿದೆ. ಅವರ ಶಿಕ್ಷಣದ ವೆಚ್ಚವನ್ನು ಸರಕಾರವೇ ಭರಿಸಲಿದೆ.

ಯೋಜನೆಯು ಒಟ್ಟು 59,048 ಕೋ.ರೂ.ಗಳದ್ದಾಗಿದ್ದು,ಈ ಪೈಕಿ 35,534 ಕೋ.ರೂ.(ಶೇ.60)ಗಳನ್ನು ಕೇಂದ್ರವು ವೆಚ್ಚ ಮಾಡಲಿದೆ. ಉಳಿದ ಮೊತ್ತವನ್ನು ರಾಜ್ಯ ಸರಕಾರಗಳು ಭರಿಸಲಿವೆ.

 2021-22ರಿಂದ ಆರಂಭಿಸಿ ನಿಗದಿತ ವೇಳಾಪಟ್ಟಿಗೆ ಅನುಗುಣವಾಗಿ ಕೇಂದ್ರದ ಪಾಲನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನೇರ ಸೌಲಭ್ಯ ವರ್ಗಾವಣೆ ವಿಧಾನದ ಮೂಲಕ ಬಿಡುಗಡೆ ಮಾಡಲಾಗುವುದು. ಇದಕ್ಕೂ ಮುನ್ನ ರಾಜ್ಯ ಸರಕಾರಗಳು ತಮ್ಮ ಪಾಲನ್ನು ಬಿಡುಗಡೆ ಮಾಡಬೇಕಾಗುತ್ತದೆ.

ಹಾಲಿ ಅಸ್ತಿತ್ವದಲ್ಲಿರುವ ‘ಬದ್ಧ ಹೊಣೆಗಾರಿಕೆ ’ ವ್ಯವಸ್ಥೆಯ ಸ್ಥಾನದಲ್ಲಿ ಹೊಸ ಯೋಜನೆಯನ್ನು ತರಲಾಗುತ್ತಿದ್ದು ಇದಕ್ಕಾಗಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ ಮತ್ತು ಯೋಜನೆಯಲ್ಲಿ ಕೇಂದ್ರ ಸರಕಾರದ ಹೆಚ್ಚಿನ ತೊಡಗುವಿಕೆ ಇರಲಿದೆ ಎಂದು ಕೇಂದ್ರ ಸಂಪುಟವು ತಿಳಿಸಿದೆ.

2017-18ರಿಂದ 2019-20ರವರೆಗಿನ ಅವಧಿಯಲ್ಲಿ ವಾರ್ಷಿಕ 1,100 ಕೋ.ರೂ.ಇದ್ದ ಕೇಂದ್ರದ ಆರ್ಥಿಕ ನೆರವನ್ನು 2020-21ರಿಂದ 2025-26ರ ಅವಧಿಗೆ ವಾರ್ಷಿಕ 6,000 ಕೋ.ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಸರಕಾರವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಅತ್ಯಂತ ಬಡಕುಟುಂಬಗಳ ವಿದ್ಯಾರ್ಥಿಗಳಿಗೆ ಅವರ ಆಯ್ಕೆಯ ಕೋರ್ಸ್‌ಗಳಿಗೆ ಪ್ರವೇಶವನ್ನು ಕಲ್ಪಿಸಲು ಅಭಿಯಾನವೊಂದನ್ನು ಆರಂಭಿಸಲಾಗುವುದು. 10ನೇ ತರಗತಿಯ ಬಳಿಕ ಶಿಕ್ಷಣವನ್ನು ಮುಂದುವರಿಸದ ಇಂತಹ 1.36 ಕೋಟಿ ವಿದ್ಯಾರ್ಥಿಗಳಿದ್ದಾರೆಂದು ಅಂದಾಜಿಸಲಾಗಿದ್ದು,ಮುಂದಿನ ಐದು ವರ್ಷಗಳಲ್ಲಿ ಅವರನ್ನು ಉನ್ನತ ಶಿಕ್ಷಣ ವ್ಯವಸ್ಥೆಯೊಳಗೆ ತರಲಾಗುವುದು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News