ಒಂದು ಕ್ಷಣ ರೈತನಾಗಿ ಆಲೋಚಿಸೋಣ

Update: 2020-12-23 18:49 GMT

ಮಾನ್ಯರೇ,

ರೈತರಿಗೆ ಈಗ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆ ಹಾಗೂ ಎಪಿಎಂಸಿ ವ್ಯವಸ್ಥೆಯನ್ನು ಸರಕಾರ ಮುಂದುವರಿಸಲಿದೆ. ಬದಲಾಗಿ, ಎಪಿಎಂಸಿ ಆವರಣದ ಹೊರಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ರೈತರಿಗೆ ಮತ್ತು ವ್ಯಾಪಾರಿಗಳಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ನೀಡುವುದು ಇದರ ಉದ್ದೇಶವಾಗಿದೆ ಎಂದು ಕೇಂದ್ರ ಸರಕಾರ ಹೊಸ ಕೃಷಿ ಕಾನೂನುಗಳನ್ನು ಸಮರ್ಥಿಸುತ್ತಿದೆ. ಎಲ್ಲರಿಗೂ ಗೊತ್ತಿರುವ ವಿಚಾರವೇ, ಈ ಹಿಂದೆ ರೈತರು ತಾವೇ ಬೀಜ ಉತ್ಪಾದನೆ ಮಾಡಿ ವ್ಯವಸಾಯ ಮಾಡುತ್ತಿದ್ದರು. ಬೀಜ ಉತ್ಪಾದನೆಯ ಬಹುರಾಷ್ಟ್ರೀಯ ಕಂಪೆನಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ನಂತರ ರೈತರನ್ನು ಕೊಳ್ಳುಬಾಕರನ್ನಾಗಿಸಿ, ಪರಂಪರಾನುಗತವಾಗಿದ್ದ ಬಿತ್ತನೆ ಬೀಜಗಳನ್ನು ಮೂಲೆಗುಂಪಾಗಿಸಿತು. ಖಾಸಗಿ ವಲಯದ ಮುಖ್ಯ ಉದ್ದೇಶವೇ ಲಾಭ ಗಳಿಸುವುದು ವಿನಃ ಕಾಳಜಿ ವಹಿಸುವುದಲ್ಲ. ಈಗ ಕೃಷಿಯಲ್ಲಿ ಕಾರ್ಪೊರೇಟ್ ಕಂಪೆನಿಗಳ ಪ್ರವೇಶದಿಂದ ಆರಂಭಿಕ ವರ್ಷಗಳಲ್ಲಿ ರೈತರನ್ನು ಉತ್ತಮ ಬೆಲೆಯ ಆಮಿಷಕ್ಕೆ ಒಳಪಡಿಸಿದಾಗ, ಸಹಜವಾಗಿಯೇ ಎಪಿಎಂಸಿ ಮುಚ್ಚಿ ಕನಿಷ್ಠ ಬೆಂಬಲ ಬೆಲೆ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ. ನಂತರದ ದಿನಗಳಲ್ಲಿ ಕಾರ್ಪೊರೇಟ್ ಕಂಪೆನಿಗಳು ಕೃಷಿ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ನಿಗದಿಪಡಿಸಿ, ರೈತರಿಗೆ ಅನಿವಾರ್ಯತೆಯನ್ನು ಸೃಷ್ಟಿಸಿ ಏಕಸ್ವಾಮ್ಯ ಮಾರುಕಟ್ಟೆ ಪದ್ಧತಿಯನ್ನು ಜಾರಿಗೆ ತರುತ್ತವೆ. ಇದರಿಂದಾಗಿ ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಲೆ ಸಿಗದೆ ಇರಬಹುದು. ಈಗಿನ ಸವಾಲೆಂದರೆ ನೆಲಕಚ್ಚಿರುವ ಕೃಷಿಯಲ್ಲಿನ ರೈತರ ಭವಿಷ್ಯವನ್ನು ಬಲಪಡಿಸಿ ಮುಂದಿನ ಎರಡು ದಶಕಗಳ ನಂತರ ಈ ಪ್ರಸ್ತುತ ಕಾಯ್ದೆಗಳನ್ನು ಜಾರಿಗೆ ತರುವುದು ಸೂಕ್ತ. ಹೊಸ ಕೃಷಿ ಕಾನೂನುಗಳನ್ನು ವಿರೋಧಿಸುವ ಮತ್ತು ಬೆಂಬಲಿಸುವ ಮುಂಚೆ ನಾವು ರೈತನ ಸ್ಥಾನದಲ್ಲಿ ನಿಂತು ಆಲೋಚಿಸೋಣ, ಆಗ ನಮ್ಮ ಸುಪ್ತಮನಸ್ಸಿನ ಅರಿವು ನಮಗೆ ವಾಸ್ತವವನ್ನು ಹಾಗೂ ರೈತರು ವ್ಯಕ್ತಪಡಿಸುತ್ತಿರುವ ಆತಂಕವನ್ನು ತೆರೆದಿಡದೆ ಇರದು.

-ಪ್ರವೀಣ ನಾಗಪ್ಪಯಲವಿಗಿ, ಹಾವೇರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News