ಕಾಶ್ಮೀರ: 10 ಜಿಲ್ಲಾ ಮಂಡಳಿಗಳ ಪೈಕಿ 9ರಲ್ಲಿ ಗುಪ್ಕರ್ ಕೂಟಕ್ಕೆ ಅಧಿಕಾರ

Update: 2020-12-24 04:07 GMT

ಶ್ರೀನಗರ : ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿಗಳಿಗೆ ನಡೆದ ಚುನಾವಣೆಯಲ್ಲಿ 10 ಡಿಡಿಸಿಗಳ ಪೈಕಿ 9ರಲ್ಲಿ ಅಧಿಕಾರ ಸೂತ್ರ ಏಳು ಪಕ್ಷಗಳ ಮೈತ್ರಿಕೂಟವಾದ ಪೀಪಲ್ಸ್ ಅಲೆಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್ (ಪಿಎಜಿಡಿ)ಗೆ ಲಭಿಸಲಿದೆ.

ಜಮ್ಮು ಪ್ರಾಂತ್ಯದಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದ್ದರೂ, 10 ಮಂಡಳಿಗಳ ಪೈಕಿ ಕನಿಷ್ಠ ನಾಲ್ಕು ಮಂಡಳಿಗಳಲ್ಲಿ ಅಧಿಕಾರದ ಸೂತ್ರ ಹಿಡಿಯಲು ಬಿಜೆಪಿಗೆ ಸ್ಥಾನಗಳ ಕೊರತೆ ಉಂಟಾಗಲಿದೆ.

ಗುಪ್ಕರ್ ಕೂಟಕ್ಕೆ ಕಾಶ್ಮೀರ ಕಣಿವೆಯ ಆರು ಜಿಲ್ಲೆಗಳಲ್ಲಿ ತಲಾ 14 ಸ್ಥಾನಗಳ ಪೈಕಿ ಒಂಬತ್ತರಿಂದ 12 ಸ್ಥಾನಗಳು ಲಭ್ಯವಾಗಿದ್ದು, ಭರ್ಜರಿ ಜಯ ಸಿಕ್ಕಿದೆ. ಶ್ರೀನಗರ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ತಲಾ ಏಳು ಸ್ಥಾನಗಳು ಸಿಕ್ಕಿದ್ದು, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಿಂದ ಬೆಂಬಲ ದೊರಕುವ ನಿರೀಕ್ಷೆ ಇದೆ.

ಶ್ರೀನಗರದಲ್ಲಿ ಗುಪ್ಕರ್ ಕೂಟವಾಗಲೀ, ಬಿಜೆಪಿಯಾಗಲೀ ಯಾವುದೇ ಪ್ರಭಾವ ಹೊಂದಿಲ್ಲ. ಅಲ್ತಫ್ ಬುಖಾರಿ ನೇತೃತ್ವದ ಅಪ್ನಿ ಪಾರ್ಟಿ ಮೂರು ಸ್ಥಾನಗಳನ್ನು ಗಳಿಸಿದ್ದು, ವಿಜೇತರಾದ ಏಳು ಮಂದಿ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರದ ಸೂತ್ರ ಹಿಡಿಯುವ ನಿರೀಕ್ಷೆ ಇದೆ.

ಜಮ್ಮು ಪ್ರಾಂತ್ಯದ ಉದ್ದಗಲಕ್ಕೂ ಅಧಿಕಾರದ ಸೂತ್ರ ಹಿಡಿಯುವ ಬಿಜೆಪಿ ಕನಸಿಗೆ ಫಲಿತಾಂಶ ತಣ್ಣೀರೆರಚಿದೆ. ಕಥೂವಾ (13), ಸಾಂಬಾ (13), ಜಮ್ಮು (11), ಉದಾಂಪುರ (11) ಮತ್ತು ದೋಡಾ (8) ಡಿಡಿಸಿಗಳಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ಸಿಕ್ಕಿದೆ. ಪೂಂಚ್ ಹಾಗೂ ರಾಜೌರಿ ಕೈಗೆಟುಕುವ ಸಾಧ್ಯತೆ ಇಲ್ಲ. ಪೂಂಚ್‌ನಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಿದ್ದರೆ, ರಾಜೌರಿಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ 5, ಪಿಡಿಪಿ 1 ಮತ್ತು ಕಾಂಗ್ರೆಸ್ 3 ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ ಉತ್ಸಾಹಕ್ಕೆ ತಣ್ಣೀರೆರಚಿವೆ.

ರಾಂಬನ್‌ನಲ್ಲಿ ಬಿಜೆಪಿ 3 ಸ್ಥಾನ ಗೆದ್ದಿದ್ದರೆ, ವಿರೋಧಿ ಬಣದಲ್ಲಿ ನ್ಯಾಷನಲ್ ಕಾನ್ಫರೆನ್ಸ್ 6 ಹಾಗೂ ಕಾಂಗ್ರೆಸ್ 2 ಸ್ಥಾನ ಹೊಂದಿವೆ. ಮೂವರು ಪಕ್ಷೇತರರು ಜಯ ಸಾಧಿಸಿದ್ದಾರೆ. ಕಿಷ್ಟ್ವಾರ್‌ನಲ್ಲಿ ಬಿಜೆಪಿ 3 ಸ್ಥಾನ ಪಡೆದಿದ್ದು, ನ್ಯಾಷನಲ್ ಕಾನ್ಫರೆನ್ಸ್ 6 ಹಾಗೂ ಕಾಂಗ್ರೆಸ್ ಮೂರು ಸ್ಥಾನಗಳನ್ನು ಹೊಂದಿವೆ.

ರಿಯಾಸಿಯಲ್ಲಿ ಬಿಜೆಪಿ ಏಳು ಸ್ಥಾನ ಹೊಂದಿದ್ದು, ಅಪ್ನಿ ಪಾರ್ಟಿ 2 ಸ್ಥಾನ ಗೆದ್ದಿದೆ. ಇಲ್ಲಿ ಗುಪ್ಕರ್ ಕೂಟಕ್ಕೆ ಅಧಿಕಾರ ಸಿಗುವ ಸಾಧ್ಯತೆ ಇಲ್ಲ. ಚುನಾವಣೆ ನಡೆದ 280 ಸ್ಥಾನಗಳ ಪೈಕಿ 278 ಸ್ಥಾನಗಳ ಫಲಿತಾಂಶ ಅಧಿಕೃತವಾಗಿ ಹೊರಬಿದ್ದಿದೆ. ದುರ್ಗ್‌ ಮುಲ್ಲಾ (ಕುಪ್ವಾರಾ) ಮತ್ತು ಹಾಜಿನ್-ಎ (ಬಂಡಿಪುರ) ಕ್ಷೇತ್ರಗಳ ಫಲಿತಾಂಶ ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News