ಕೃಷಿ ಕಾನೂನು ಬೆಂಬಲಿಸಿ ಉತ್ತರಪ್ರದೇಶದ 20,000 ರೈತರಿಂದ ಇಂದು ದಿಲ್ಲಿಯತ್ತ ಮೆರವಣಿಗೆ
Update: 2020-12-24 10:45 IST
ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ಬೆಂಬಲಿಸಿ ಕಿಸಾನ್ ಸೇನಾದ ಸುಮಾರು 20,000 ಸದಸ್ಯರುಗಳು ಪಶ್ಚಿಮ ಉತ್ತರಪ್ರದೇಶದಿಂದ ದಿಲ್ಲಿಗೆ ಗುರುವಾರ ಮೆರವಣಿಗೆ ನಡೆಸಲಿದ್ದಾರೆ.
ಪಂಜಾಬ್ ಹಾಗೂ ಹರ್ಯಾಣದ 10,000ದಷ್ಟು ರೈತರು ಸತತ 28 ದಿನಗಳಿಂದ ದಿಲ್ಲಿಯ ಗಡಿ ಪ್ರದೇಶದಲ್ಲಿ ಉಷ್ಣಾಂಶ 2-3 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದರೂ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತ ಸಂಘಟನೆಗಳ ಜಂಟಿ ವೇದಿಕೆ ಸಂಯುಕ್ತ ಕಿಸಾನ್ ಮೋರ್ಚಾ ಕೇಂದ್ರ ಸರಕಾರ ಮೂರು ಕೃಷಿ ಕಾನೂನುಗಳ ಕುರಿತು ಮಾತುಕತೆಗೆ ಆಹ್ವಾನಿಸಿದ್ದನ್ನು ತಿರಸ್ಕರಿಸಿದೆ. ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆನ್ನುವುದು ತಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಸಂಘಟನೆಗಳು ಹೇಳಿವೆ.