ತನ್ನ ವಿವಾಹವನ್ನು ಮುಂದೂಡಿ ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾದ ಪಂಜಾಬ್ ಯುವಕ
ಹೊಸದಿಲ್ಲಿ, ಡಿ.24: ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವಾರು ಕಡೆಗಳಿಂದ ರೈತರಿಗೆ ಬೆಂಬಲ ಹರಿದು ಬಂದಿತ್ತು. ಇದೀಗ ಯುಎಇಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕನೋರ್ವ ಮದುವೆಯಾಗಲೆಂದು ಊರಿಗೆ ಬಂದಿದ್ದು, ಬಳಿಕ ತನ್ನ ಮದುವೆಯ ಯೋಜನೆಯನ್ನೇ ಮುಂದೂಡಿ ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾದ ಘಟನೆಯ ಕುರಿತು indiatoday.com ವರದಿ ಮಾಡಿದೆ.
ಎರಡು ವರ್ಷಗಳ ಕಾಲ ಅಬುಧಾಬಿಯಲ್ಲಿ ಪ್ಲಂಬರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸತ್ನಮ್ ಸಿಂಗ್ ಮದುವೆಯಾಗಬೇಕೆಂಬ ಯೋಜನೆಯೊಂದಿಗೆ ತನ್ನ ಊರು ಜಲಂಧರ್ ಗೆ ಆಗಮಿಸಿದ್ದರು. ನವೆಂಬರ್ 29ರಂದು ಅವರು ಊರಿಗೆ ಆಗಮಿಸಿದ್ದ ವೇಳೆ ತನ್ನ ತಂದೆ ಮತ್ತು ಹಿರಿಯ ಸಹೋದರ ಸಿಂಘು ಬಾರ್ಡರ್ ನಲ್ಲಿ ಕೇಂದ್ರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆಂದು ತಿಳಿದು ಬಂತು.
PTI ಸುದ್ದಿ ಸಂಸ್ಥೆಯು ವರದಿ ಮಾಡಿದಂತೆ, ಪ್ರತಿಭಟನೆಯ ಕುರಿತು ತಿಳಿದ ಕೂಡಲೇ ಸತ್ನಮ್ ಸಿಂಗ್ ತನ್ನ ಸ್ನೇಹಿತನೊಂದಿಗೆ ದಿಲ್ಲಿ-ಹರ್ಯಾಣ ಗಡಿಗೆ ತೆರಳಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.
“ಎರಡು ತಿಂಗಳ ರಜೆಯ ಮೇರೆಗೆ ಬಂದಿರುವ ನಾನು ಮದುವೆಯಾಗಬೇಕೆಂದು ನನ್ನ ಹೆತ್ತವರು ಬಯಸುತ್ತಿದ್ದಾರೆ. ನನ್ನ ತಾಯಿಗೆ ಈಗಾಗಲೇ 70 ವರ್ಷವಾಗಿದ್ದು, ಅವರಿಗೆ ಮನೆ ನಡೆಸಲು ಕಷ್ಟವಾಗುತ್ತಿದೆ. ನನ್ನ ತಂದೆಯ ಆರೋಗ್ಯವೂ ಅಷ್ಟೇನೂ ಚೆನ್ನಾಗಿಲ್ಲ. ಈ ಹೋರಾಟದಲ್ಲಿ ನಾವು ಜಯಗಳಿಸುವವರೆಗೂ ನಾನು ಹಿಂದಿರುಗುವುದಿಲ್ಲ. ಮದುವೆ ಮತ್ತು ಕೆಲಸ ತಡವಾದರೂ ತೊಂದರೆಯಿಲ್ಲ. ಅಬುಧಾಬಿಗೆ ತೆರಳುವ ಮುಂಚೆ ನಾನೂ ರೈತನಾಗಿಯೇ ಕೆಲಸ ಮಾಡುತ್ತಿದ್ದೆ. ನಮ್ಮ ಜಮೀನನ್ನು ಉಳಿಸಬೇಕು” ಎಂದು ಸತ್ನಮ್ ಸಿಂಗ್ ಹೇಳಿದ್ದಾಗಿ ವರದಿಯಾಗಿದೆ.