ಅಮಿತ್ ಶಾ ನನ್ನ ಮನೆಯಲ್ಲಿ ಊಟ ಮಾಡಿ, ಏನೂ ಮಾತನಾಡದೆ ಹೋದರು: ಜನಪದ ಗಾಯಕ ದಾಸ್ ಆರೋಪ

Update: 2020-12-24 06:28 GMT

ಕೊಲ್ಕತ್ತಾ,ಡಿ.24: ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ವೇಳೆ ಬಂಗಾಳಿ ಜನಪದ ಗಾಯಕ ಬಸುದೇಬ್ ದಾಸ್ ಬೌಲ್ ಅವರ ಬೋಲ್ಪುರ್ ನಿವಾಸದಲ್ಲಿ ಊಟ ಮಾಡಿದ್ದರು. ಇದೀಗ ಗಾಯಕ ದಾಸ್ ಬಿಜೆಪಿ ಬಗ್ಗೆ ತಮ್ಮ ಅಸಮಾಧಾನ ಹೊರಗೆಡಹಿದ್ದಾರೆ. ಬಿಜೆಪಿ ನನಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿಲ್ಲ ಹಾಗೂ ರವಿವಾರ ಊಟವಾದ ನಂತರ ಅಮಿತ್ ಶಾ ತಮ್ಮ ಜತೆ ಮಾತನಾಡಿಲ್ಲ ಎಂದು ದೂರಿದ್ದಾರೆ. ಆ ದಿನ ದಾಸ್ ಅವರು ಶಾ ಅವರಿಗಾಗಿ ಕೆಲ ಜನಪದ ಹಾಡುಗಳನ್ನು ಹಾಡಿದ್ದರು.

“ಅಮಿತ್ ಶಾ ನನ್ನ ಮನೆಗೆ ಬಂದು ಊಟ ಮಾಡಿ ಹೊರಟು ಹೋದರು. ಅವರ ಜತೆ ಮಾತನಾಡುವ ಅವಕಾಶ ದೊರಕಿಲ್ಲ. ಅವರು ನನಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿಲ್ಲ. ಶಾ ಭೇಟಿಯ ನಂತರ ಬಿಜೆಪಿಯ ಯಾರು ಕೂಡಾ ನನ್ನ ಜತೆ ಸಂಪರ್ಕದಲ್ಲಿಲ್ಲ. ನನ್ನ ಪುತ್ರಿಯ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಗೃಹ ಸಚಿವರಲ್ಲಿ ಮನವಿ ಮಾಡಲು ಬಯಸುತ್ತೇನೆ,” ಎಂದು ಅವರು ಹೇಳಿದರು.

ಮಂಗಳವಾರ ದಾಸ್ ಅವರು ಟಿಎಂಸಿಯ ಬಿರ್ಭುಂ ಜಿಲ್ಲಾ ಮುಖ್ಯಸ್ಥ ಅನುಬ್ರತ ಮೊಂಡಲ್ ಅವರನ್ನು ಪಕ್ಷದ ಕಚೇರಿಯಲ್ಲಿ ಭೇಟಿಯಾದ ನಂತರ ಮೇಲಿನ ಮಾತುಗಳನ್ನು ಆಡಿದ್ದಾರೆ. ಡಿಸೆಂಬರ್ 29ರಂದು ಬೋಲ್ಪುರ್‍ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರ್ಯಾಲಿ ವೇಳೆ ತಾವು ಪ್ರದರ್ಶನ ನೀಡುವುದಾಗಿಯೂ ಅವರು ಹೇಳಿದ್ದಾರೆ.

ಟಿಎಂಸಿಯ ಶಿಕ್ಷಣ ಘಟಕವು ದಾಸ್ ಪುತ್ರಿಯ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡಲಿದೆ ಎಂದು ಮೊಂಡಲ್ ಹೇಳಿದ್ದಾರೆ. “ಅಮಿತ್ ಶಾ ಅವರು ದಾಸ್ ಮನೆಗೆ ನಾಟಕವಾಡಲು ಬಂದಿದ್ದರು. ದಾಸ್ ಅವರ ಪುತ್ರಿಯ ಶಿಕ್ಷಣದ ಎಲ್ಲಾ ವೆಚ್ಚಗಳನ್ನು ಭರಿಸಲು ನಾವು ನಿರ್ಧರಿಸಿದ್ದೇವೆ,” ಎಂದು ಟಿಎಂಸಿ ನಾಯಕ ಹೇಳಿದ್ದಾರೆ.

ಅತ್ತ ಬಿಜೆಪಿ ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಗಾಯಕ ದಾಸ್ ಅವರ ಬಗ್ಗೆ ಕಳೆದ 10 ವರ್ಷಗಳಲ್ಲಿ ಯಾವುದೇ ಕಾಳಜಿ ವಹಿಸದ ಟಿಎಂಸಿ ಇದೀಗ ಸಚಿವ ಅಮಿತ್ ಶಾ ಭೇಟಿಯ ನಂತರ ಕಾರ್ಯೋನ್ಮುಖವಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News