ಮುಝಫ್ಫರ್ ನಗರ ಗಲಭೆ: ಬಿಜೆಪಿ ಮುಖಂಡರ ವಿರುದ್ಧದ ಕೇಸ್ ವಾಪಸ್ ಪಡೆಯಲು ಮುಂದಾದ ಆದಿತ್ಯನಾಥ್ ಸರ್ಕಾರ

Update: 2020-12-24 07:22 GMT

ಲಕ್ನೋ,ಡಿ.24:  ಏಳು ವರ್ಷಗಳ ಹಿಂದೆ ಸೆಪ್ಟೆಂಬರ್ 2013ರಲ್ಲಿ  ಮುಝಫ್ಫರ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೇಳುವ ಮುನ್ನ ಅಲ್ಲಿನ ನಗ್ಲಾ ಮಂಡೋರ್ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಮಹಾ ಪಂಚಾಯತ್‍ನಲ್ಲಿ  ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಹೊತ್ತ  ಮೂವರು ಶಾಸಕರ ಸಹಿತ ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲು ಯೋಗಿ ಆದಿತ್ಯನಾಥ್ ಸರಕಾರ ಮುಂದಾಗಿದೆ.

ಸಂಘಪರಿವಾರ ನಾಯಕಿ ಸಾಧ್ವಿ ಪ್ರಾಚಿ ಸೇರಿದಂತೆ ಶಾಸಕರುಗಳಾದ ಸಂಗೀತ್ ಸೋಮ್, ಸುರೇಶ್ ರಾಣಾ, ಕಪಿಲ್ ದೇವ್ ಈ ಪ್ರಕರಣದ ಆರೋಪಿಗಳ ಪೈಕಿ ಸೇರಿದ್ದಾರೆ. ನಿಷೇಧಾಜ್ಞೆ ಉಲ್ಲಂಘಿಸಿ ಸರಕಾರಿ ಅಧಿಕಾರಿಗಳ ಜತೆ ವ್ಯಾಗ್ಯುದ್ಧ ನಡೆಸಿ ಹಿಂಸೆಯಲ್ಲಿ ತೊಡಗಿದ ಆರೋಪವೂ ಇವರ ಮೇಲಿದೆ. ಅವರ ವಿರುದ್ಧದ ಪ್ರಕರಣ ವಾಪಸ್ ಪಡೆಯಲು ಅಪೀಲು ಸಲ್ಲಿಸಲಾಗಿದ್ದು ಅದು ವಿಚಾರಣೆಗೆ ಬಾಕಿಯಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆಗಸ್ಟ್ 27, 2013ರಂದು ಕವಾಲ್ ಗ್ರಾಮದಲ್ಲಿ ಇಬ್ಬರು ಯುವಕರ ಹತ್ಯೆ ಸಂಬಂಧ ಮುಂದಿನ ಕ್ರಮದ ಕುರಿತು ನಿರ್ಧರಿಸಲು ಜಾಟ್ ಸಮುದಾಯವು ನಗ್ಲಾ ಮಂಡೋರ್‍ನ ಕಾಲೇಜ್ ಆವರಣದಲ್ಲಿ ಮಹಾಪಂಚಾಯತ್ ಕರೆದಿತ್ತು. ಮುಸ್ಲಿಂ ಯುವಕ ಶಾನವಾಝ್ ಖುರೇಷಿ ಎಂಬಾತನನ್ನು ಹತ್ಯೆಗೈದಿದ್ದಾರೆನ್ನಲಾದ ಸಚಿನ್ ಹಾಗೂ ಗೌರವ್ ಎಂಬ ಯುವಕರನ್ನು ಮುಸ್ಲಿಂ ಗುಂಪೊಂದು ಥಳಿಸಿ ಸಾಯಿಸಿದ ನಂತರ ಈ ಮಹಾಪಂಚಾಯತ್ ನಡೆದಿತ್ತು.

ಆದರೆ ಇದರಲ್ಲಿ ಭಾಗವಹಿಸಿ ಮರಳುತ್ತಿದ್ದ ಮಂದಿಯ ಮೇಲೆ ದಾಳಿ ನಡೆದ ನಂತರ ಹಿಂಸೆ ಭುಗಿಲೆದ್ದಿತ್ತು. ಹಲವೆಡೆ ಹರಡಿದ ಹಿಂಸಾಚಾರದಿಂದಾಗಿ 65 ಮಂದಿ ಸಾವಿಗೀಡಾಗಿ 40,000 ಮಂದಿ ಮನೆಮಠ ಕಳೆದುಕೊಂಡಿದ್ದರು.

ಅನುಮತಿ ಪಡೆಯದೆ ನಡೆದ ಮಹಾಪಂಚಾಯತ್‍ನಲ್ಲಿ ಒಂದು ಸಮುದಾಯದ ವಿರುದ್ಧ ಪ್ರಚೋದನಕಾರಿ ಭಾಷಣ ನೀಡಿದ್ದಕ್ಕಾಗಿ ಮೂವರು ಶಾಸಕರು, ಮಾಜಿ ಸಂಸದ ಹರೇಂದ್ರ ಸಿಂಗ್ ಮಲಿಕ್ ಸಹಿತ 40 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

ರಾಜ್ಯ ಸರಕಾರ ರಚಿಸಿದ್ದ ಎಸ್‍ಐಟಿಯು, ರಾಣಾ, ಕಪಿಲ್, ಪ್ರಾಚಿ ಹಾಗೂ ಮಲಿಕ್ ಸಹಿತ 14 ಮಂದಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.ಫೆಬ್ರವರಿ 2018ರಲ್ಲಿ ಬಿಜೆಪಿ ಸಂಸದ ಸಂಜೀವ್ ಬಲ್ಯಾನ್ ನೇತೃತ್ವದಲ್ಲಿ ಖಾಪ್ ಚೌಧುರಿಗಳು ಮುಖ್ಯಮಂತ್ರಿ ಆದಿತ್ಯನಾಥ್ ರನ್ನು ಭೇಟಿಯಾಗಿ  ಮುಝಫ್ಫರ್ ನಗರ ದಂಗೆಗಳಿಗೆ ಸಂಬಂಧಿಸಿದಂತೆ ಹಿಂದುಗಳ ವಿರುದ್ಧ ದಾಖಲಾದ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಕೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News