ಪ್ರಿಯಾಂಕಾ ಗಾಂಧಿ, ಇತರ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು

Update: 2020-12-24 15:01 GMT

ಹೊಸದಿಲ್ಲಿ, ಡಿ. 23: ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್ ಗುರುವಾರ ರಾಷ್ಟ್ರಪತಿ ಭವನಕ್ಕೆ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯನ್ನು ತಡೆದಿರುವ ಪೊಲೀಸರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಇತರ ಪ್ರಮುಖ ನಾಯಕರನ್ನು ವಶಕ್ಕೆ ತೆಗೆದುಕೊಂಡರು.

ನೂತನ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ಹೊಸದಿಲ್ಲಿಯ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ 29ನೇ ದಿನಕ್ಕೆ ಕಾಲಿರಿಸಿದೆ. ಈ ನಡುವೆ ಸಮಸ್ಯೆಯ ಗಂಭೀರತೆ ಪರಿಗಣಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಧ್ಯೆಪ್ರವೇಶಿಸುವಂತೆ ಕೋರಲು ಕಾಂಗ್ರೆಸ್ ನಿಯೋಗ ಗುರುವಾರ ರಾಷ್ಟ್ರಪತಿ ಭವನಕ್ಕೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿತ್ತು.

ಕಳೆದ ಮೂರು ತಿಂಗಳಿಂದ ಸಂಗ್ರಹಿಸಿರುವ 2 ಕೋಟಿ ಹಸ್ತಾಕ್ಷರ ಇರುವ ಪತ್ರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ನಿಯೋಗ ನಿರ್ಧರಿಸಿತ್ತು. ಕಾಂಗ್ರೆಸ್‌ನ ಸಂಸದರು ಸೇರಿದಂತೆ ಹಲವು ಮುಖಂಡರು ನಿಯೋಗದಲ್ಲಿ ಇದ್ದರು. ಆದರೆ, ಕಾಂಗ್ರೆಸ್ ನಿಯೋಗವನ್ನು ತಡೆದ ಪೊಲೀಸರು ಪ್ರಿಯಾಂಕಾ ಗಾಂಧಿ ಸೇರಿದಂತೆ ಕೆಲವು ಮುಖಂಡರನ್ನು ವಶಕ್ಕೆ ತೆಗೆದುಕೊಂಡರು.

ಅಲ್ಲದೆ, ಅನುಮತಿ ಪಡೆದ ನಾಯಕರಿಗೆ ಮಾತ್ರ ರಾಷ್ಟ್ರಪತಿ ಭವನಕ್ಕೆ ತೆರಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಪ್ರಿಯಾಂಕಾ ಗಾಂಧಿ ಅಲ್ಲದೆ ಪಕ್ಷದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಹರ್ಯಾಣ ಕಾಂಗ್ರೆಸ್‌ನ ಅಧ್ಯಕ್ಷೆ ಕುಮಾರಿ ಸೆಲ್ಜಾ, ಸಿಡಬ್ಲ್ಯುಸಿ ಕುಲ್‌ದೀಪ್ ಬಿಷ್ಣೋಯಿ ಹಾಗೂ ಮಹಾರಾಷ್ಟ್ರ ಉಸ್ತುವಾರಿ ಎಚ್.ಕೆ. ಪಾಟೀಲ್ ಅವರನ್ನು ಕೂಡ ಪೊಲೀಸರು ವಶಕ್ಕೆ ತೆಗೆದುಕೊಂಡರು. ‘‘ನಾವು ಪ್ರಜಾಪ್ರಭುತ್ವದಲ್ಲಿ ಜೀವಿಸುತ್ತಿದ್ದೇವೆ. ಅವರು ಚುನಾಯಿತ ಸಂಸದರು. ಅವರಿಗೆ ರಾಷ್ಟ್ರಪತಿ ಅವರನ್ನು ಭೇಟಿಯಾಗುವ ಹಕ್ಕು ಇದೆ. ಅವರಿಗೆ ಅವಕಾಶ ನೀಡಬೇಕು. ಅದರಲ್ಲಿರುವ ಸಮಸ್ಯೆ ಏನು ? ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಲಕ್ಷಾಂತರ ರೈತರ ಧ್ವನಿಯನ್ನು ಆಲಿಸಲು ಸರಕಾರ ಸಿದ್ಧರಿಲ್ಲ’’ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

‘‘ಸರಕಾರದ ವಿರುದ್ಧದ ಯಾವುದೇ ಭಿನ್ನಾಭಿಪ್ರಾಯವನ್ನು ಭಯೋತ್ಪಾದಕ ಅಂಶಗಳು ಎಂದು ವರ್ಗೀಕರಿಸಲಾಗುತ್ತಿದೆ. ರೈತರನ್ನು ಬೆಂಬಲಿಸಲು ನಾವು ಈ ರ‍್ಯಾಲಿ ನಡೆಸಿದೆವು’’ ಎಂದು ಅವರು ಹೇಳಿದರು. ‘‘ಕೆಲವು ಸಂದರ್ಭ ಅವರು ನಾವು (ಕಾಂಗ್ರೆಸ್) ತುಂಬಾ ದುರ್ಬಲ. ನಮಗೆ ಪ್ರತಿಪಕ್ಷಗಳಾಗುವ ಅರ್ಹತೆ ಇಲ್ಲ ಎಂದು ಹೇಳುತ್ತಾರೆ. ಇನ್ನು ಕೆಲವೊಮ್ಮೆ ನಾವು ಪ್ರಬಲ. ದಿಲ್ಲಿಯ ಗಡಿಯಲ್ಲಿ ಲಕ್ಷಾಂತರ ರೈತರ ಪ್ರತಿಭಟನೆ ನಡೆಸುವಂತೆ ಒತ್ತಡ ಹೇರಿದ್ದೇವೆ ಎಂದು ಹೇಳುತ್ತಾರೆ’’ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News