×
Ad

ಅಬುಲ್ ಕಲಾಂ ಆಝಾದ್ ಅವರಿಗೆ ಭಾರತ ಮತ್ತು ಭಾರತೀಯತೆಯಲ್ಲಿ ನಂಬಿಕೆಯಿರಲಿಲ್ಲ ಎಂದ ಬಿಜೆಪಿ ಸಚಿವ

Update: 2020-12-24 19:49 IST

ಹೊಸದಿಲ್ಲಿ,ಡಿ.24: ದೇಶದ ಮೊದಲ ಶಿಕ್ಷಣ ಸಚಿವರಾಗಿದ್ದ ಅಬುಲ್ ಕಲಾಂ ಆಝಾದ್ ಅವರು ಭಾರತ ಮತ್ತು ಭಾರತೀಯತೆಯಲ್ಲಿ ನಂಬಿಕೆಯನ್ನು ಹೊಂದಿರಲಿಲ್ಲ ಎಂಬ ಉತ್ತರ ಪ್ರದೇಶದ ಸಚಿವ ಹಾಗೂ ಬಿಜೆಪಿ ನಾಯಕ ಆನಂದ್ ಸ್ವರೂಪ ಶುಕ್ಲಾ ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷವು ‘ದುರದೃಷ್ಟಕರ ’ಎಂದು ಬಣ್ಣಿಸಿದೆ.

ಬಲಿಯಾದ ಜನನಾಯಕ ಚಂದ್ರಶೇಖರ್ ವಿವಿಯಲ್ಲಿ ಕಾರ್ಯಕ್ರಮವೊಂದನ್ನುದ್ದೇಶಿಸಿ ಮಂಗಳವಾರ ಮಾತನಾಡಿದ್ದ ಶುಕ್ಲಾ,ಆಝಾದ್ ಅವರ ಹೃದಯದಲ್ಲಿ ಭಾರತ ಮತ್ತು ಭಾರತೀಯತೆಗೆ ಸ್ಥಾನವಿರಲಿಲ್ಲ ಎಂದು ಹೇಳಲು ತನಗೆ ಯಾವುದೇ ಹಿಂಜರಿಕೆಯಿಲ್ಲ. ಇಸ್ಲಾಮನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದ್ದ ಮೊಗಲ್ ದೊರೆ ಔರಂಗಜೇಬ್‌ನಿಂದ ತಮ್ಮನ್ನು ರಕ್ಷಿಸುವಂತೆ ಕಾಶ್ಮೀರಿ ಪಂಡಿತರು ಗುರು ತೇಗ್ ಬಹಾದೂರ್ ಅವರನ್ನು ಕೋರಿದ್ದರು. ಗುರುಗಳು ಔರಂಗಜೇಬನ ಬಳಿ ತೆರಳಿದ್ದಾಗ ಅವರ ಶಿರಚ್ಛೇದ ಮಾಡಲಾಗಿತ್ತು. ಈ ಅಂಶವನ್ನು ಚರಿತ್ರೆಯಿಂದ ತೆಗೆದುಹಾಕಲಾಗಿತ್ತು. ಅಕ್ಬರ್‌ನ ಆಡಳಿತ ಕುರಿತು ವಿವರವಾದ ದಾಖಲೆ ಐನ್-ಇ-ಅಕ್ಬರಿಯಲ್ಲಿ ಮತ್ತು ಆಗಿನ ಕಾಲದ ಇತಿಹಾಸಜ್ಞರು ಆತನನ್ನು ಮಹಾನ್ ವ್ಯಕ್ತಿ ಎಂದು ಪರಿಗಣಿಸಿರದಿದ್ದರೂ ಚರಿತ್ರೆಯಲ್ಲಿ ಹಾಗೆ ಬಿಂಬಿಸಲಾಗಿತ್ತು ಎಂದು ಆರೋಪಿಸಿದ್ದರು.

ಶುಕ್ಲಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಉ.ಪ್ರ.ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್ ಅವರು,ಇಂತಹ ಹೇಳಿಕೆಗಳು ರಾಜ್ಯದ ಸಚಿವರೊಬ್ಬರ ಬಾಯಿಯಿಂದ ಹೊರಬೀಳುತ್ತಿರುವುದು ದುರದೃಷ್ಟಕರ ಎಂದು ತಿಳಿಸಿದರು.

ಆಝಾದ್ ಸದೃಢ ಶಿಕ್ಷಣ ವ್ಯವಸ್ಥೆಯ ಮೂಲಕ ಬಲಿಷ್ಠ ಭಾರತಕ್ಕೆ ಅಡಿಪಾಯವನ್ನು ಹಾಕಿದ್ದರು. ದೇಶದ ಮೊದಲ ಶಿಕ್ಷಣ ಸಚಿವರಾಗಿ ಗ್ರಾಮೀಣ ಬಡ ವಿದ್ಯಾರ್ಥಿಗಳು ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಒದಗಿಸಲು ಅವರು ಒತ್ತು ನೀಡಿದ್ದರು. ಅವರ ಕುರಿತು ಇಂತಹ ಹೇಳಿಕೆಗಳು ನಗೆ ತರಿಸುತ್ತಿವೆ ಮತ್ತು ಅನಗತ್ಯವಾಗಿವೆ ಎಂದರು.

ಆಝಾದ್ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅವರ ಜನ್ಮದಿನವಾದ ಡಿ.11ನ್ನು ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News