×
Ad

ಸೌದಿ ಯುವರಾಜಗೆ ವಿಚಾರಣೆಯಿಂದ ವಿನಾಯಿತಿ ನೀಡುವ ಕುರಿತು ಟ್ರಂಪ್ ಆಡಳಿತ ಪರಿಶೀಲನೆ

Update: 2020-12-24 21:08 IST
ಮುಹಮ್ಮದ್ ಬಿನ್ ಸಲ್ಮಾನ್

ವಾಶಿಂಗ್ಟನ್, ಡಿ. 24: ಸೌದಿ ಅರೇಬಿಯದ ಉನ್ನತ ಮಟ್ಟದ ಮಾಜಿ ಅಧಿಕಾರಿಯೊಬ್ಬರನ್ನು ಕೊಲ್ಲಲು ಪಿತೂರಿ ನಡೆಸಿದ ಆರೋಪ ಎದುರಿಸುತ್ತಿರುವ ದೇಶದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ಗೆ ವಿಚಾರಣೆ ಮತ್ತು ಶಿಕ್ಷೆಯಿಂದ ವಿನಾಯಿತಿ ನೀಡುವಂತೆ ಕೋರುವ ಆ ದೇಶದ ಮನವಿಯನ್ನು ಅಮೆರಿಕದ ಟ್ರಂಪ್ ಆಡಳಿತ ಪರಿಶೀಲಿಸುತ್ತಿರುವ ಕುರಿತು ಬಲ್ಲ ಮೂಲವೊಂದು ತಿಳಿಸಿದೆ ಎಂದು ‘ಬ್ಲೂಮ್‌ಬರ್ಗ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಮೆರಿಕದ ವಿದೇಶಾಂಗ ಇಲಾಖೆಯ ಕಾನೂನು ಕಚೇರಿ ಈ ಮನವಿಯನ್ನು ಪರಿಶೀಲಿಸುತ್ತಿದೆ ಹಾಗೂ ಅದು ತನ್ನ ವರದಿಯನ್ನು ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊಗೆ ಸಲ್ಲಿಸಲಿದೆ ಎಂದು ಮೂಲ ತಿಳಿಸಿದೆ. ಬಳಿಕ, ಪಾಂಪಿಯೊ ಈ ವಿಷಯದಲ್ಲಿ ಕಾನೂನು ಇಲಾಖೆಗೆ ಶಿಫಾರಸು ಮಾಡಲಿದ್ದಾರೆ.

ಮುಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ವಾಶಿಂಗ್ಟನ್‌ನ ಫೆಡರಲ್ ನ್ಯಾಯಾಲಯವೊಂದರಲ್ಲಿ ಆಗಸ್ಟ್‌ನಲ್ಲಿ ಮೊಕದ್ದಮೆ ದಾಖಲಾಗಿದೆ.

ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನವರಿ 20ರಂದು ಶ್ವೇತಭವನವನ್ನು ತೆರವುಗೊಳಿಸುವ ಮುನ್ನ ಅಮೆರಿಕವು ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಸೌದಿ ಅರೇಬಿಯ ಬಯಸಿದೆ.

ಈ ಪ್ರಕರಣದಲ್ಲಿ ಸೌದಿ ಯುವರಾಜನಿಗೆ ವಿಚಾರಣೆಯಿಂದ ವಿನಾಯಿತಿ ನೀಡಿದರೆ, ಅದು ಸೌದಿ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆ ಪ್ರಕರಣದ ಮೇಲೂ ಗಂಭೀರ ಪರಿಣಾಮ ಬೀರಬಹುದು ಎಂಬ ಭೀತಿ ವ್ಯಕ್ತವಾಗಿದೆ.

‘ವಾಶಿಂಗ್ಟನ್ ಪೋಸ್ಟ್’ನ ಅಂಕಣಕಾರನಾಗಿದ್ದ ಖಶೋಗಿಯನ್ನು ಟರ್ಕಿ ದೇಶದ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸೌದಿ ಯುವರಾಜನ ಆದೇಶದಂತೆ ಸೌದಿಯ ಗುಪ್ತಚರ ವಿಭಾಗದ ಅಧಿಕಾರಿಗಳ ತಂಡವೊಂದು ಈ ಹತ್ಯೆ ನಡೆಸಿದೆ ಎಂದು ಆರೋಪಿಸಲಾಗಿದೆ. ಖಶೋಗಿ ಸೌದಿ ಯುವರಾಜನ ತೀವ್ರ ಟೀಕಾಕಾರರಾಗಿದ್ದರು.

ಅಮೆರಿಕದ ಗುಪ್ತಚರ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದ ಸೌದಿ ಅರೇಬಿಯದ ಮಾಜಿ ಉನ್ನತ ಮಟ್ಟದ ಅಧಿಕಾರಿ ಸಅದ್ ಅಲ್‌ಜಾಬ್ರಿಯನ್ನು ಪತ್ತೆಹಚ್ಚಲು ಸೌದಿ ಯುವರಾಜ ಅಮೆರಿಕದಲ್ಲಿ ತನ್ನ ಜನರನ್ನು ನಿಯೋಜಿಸಿದ್ದರು ಹಾಗೂ ಬಳಿಕ ಅವರನ್ನು ಕೊಲ್ಲಲು ಅಲ್ಲಿಗೆ ತಂಡವೊಂದನ್ನು ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ.

ಸೌದಿಯ ಹಂತಕರ ತಂಡವೊಂದು ನನ್ನನ್ನು ಕೊಲ್ಲುವುದಕ್ಕಾಗಿ ಕೆನಡಕ್ಕೆ ಹೋಗಿತ್ತು. ಆದರೆ ಅಲ್ಲಿ ಗಡಿ ಅಧಿಕಾರಿಗಳು ಅವರನ್ನು ತಡೆದರು ಎಂಬುದಾಗಿ ಅಲ್‌ಜಾಬ್ರಿ ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ದೂರಿನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News