ದಿಲ್ಲಿ ಗಲಭೆಯಲ್ಲಿ ರಾಷ್ಟ್ರಗೀತೆ ಹಾಡುವಂತೆ ಬಲವಂತಕ್ಕೊಳಗಾದ ವ್ಯಕ್ತಿ ಮೃತ್ಯು

Update: 2020-12-24 16:53 GMT

ಹೊಸದಿಲ್ಲಿ, ಡಿ. 23: ಫೆಬ್ರವರಿಯಲ್ಲಿ ನಡೆದ ಗಲಭೆ ಸಂದರ್ಭ ಪೊಲೀಸರಿಂದ ರಾಷ್ಟ್ರಗೀತೆ ಹಾಡುವಂತೆ ಒತ್ತಾಯಕ್ಕೆ ಹಾಗೂ ಥಳಿತಕ್ಕೆ ಒಳಗಾಗುತ್ತಿರುವ ವೀಡಿಯೊದಲ್ಲಿ ಇದ್ದ ಹಲವರಲ್ಲಿ ಓರ್ವನ ಸಾವಿನ ಕುರಿತ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ದಿಲ್ಲಿ ಪೊಲೀಸ್‌ನ ಕ್ರೈಮ್ ಬ್ರಾಂಚ್‌ಗೆ ನಿರ್ದೇಶಿಸಿದೆ.

9 ತಿಂಗಳು ಕಳೆದರೂ ತನಿಖೆಯಲ್ಲಿ ಸ್ವಲ್ಪ ಮಾತ್ರ ಪ್ರಗತಿಯಾಗಿದೆ ಎಂದು ಸಾವನ್ನಪ್ಪಿದ ವ್ಯಕ್ತಿಯ ತಾಯಿ ಆರೋಪಿಸಿದೆ ಎಂಬುದರ ಬಗ್ಗೆ ‘ಲೈವ್ ಲಾ’ ವರದಿ ಮಾಡಿದೆ. ಪ್ರಕರಣದ ತನಿಖೆಯನ್ನು ನ್ಯಾಯಾಲಯ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ ನಡೆಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಕ್ರೈಮ್ ಬ್ರಾಂಚ್‌ಗೆ ನೋಟಿಸು ಜಾರಿ ಮಾಡಿದೆ.

ಪೊಲೀಸರು ಲಾಠಿಯಿಂದ ಥಳಿಸುತ್ತಿರುವ, ಎಳೆದಾಡುತ್ತಿರುವ ಹಾಗೂ ಒದೆಯುತ್ತಿರುವ ಸಂದರ್ಭ ಐವರು ವ್ಯಕ್ತಿಗಳು ನೋವಿನಿಂದ ಬಿದ್ದುಕೊಂಡಿರುವ ವೀಡಿಯೊ ವೈರಲ್ ಆಗಿತ್ತು. ರಾಷ್ಟ್ರಗೀತೆ ಹಾಡುವಂತೆ ಪೊಲೀಸರು ಒತ್ತಾಯಿಸುತ್ತಿರುವುದು, ಅವರು ಗಾಯಗೊಂಡ ಸ್ಥಿತಿಯಲ್ಲಿ ರಾಷ್ಟ್ರಗೀತೆ ಹಾಡಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿತ್ತು. ಈ ವೀಡಿಯೊ ಫೆಬ್ರವರಿ 25ರಂದು ವೈರಲ್ ಆಗಿತ್ತು. ಈಶಾನ್ಯ ದಿಲ್ಲಿಯ ಕರ್ದಮ್ ಪುರಿಯಲ್ಲಿ ಹಿಂದಿನ ರಾತ್ರಿ ಹಲ್ಲೆ ನಡೆಸಿದ್ದ ಪೊಲೀಸರೇ ಈ ವೀಡಿಯೊ ದಾಖಲಿಸಿದ್ದರು. ಐವರಲ್ಲಿ ಗುಂಡಿನಿಂದ ಗಂಭೀರ ಗಾಯಗೊಂಡಿದ್ದ 23 ವರ್ಷದ ಫೈಝಾನ್ ಒಂದು ದಿನದ ಬಳಿಕ ಮೃತಪಟ್ಟಿದ್ದರು. 

ಮಾರ್ಚ್ 3ರಂದು ‘ದಿ ವೈರ್’ ಫೈಝಾನ್‌ನ ತಾಯಿ ಕಿಸ್ಮತುನ್ ಅವರನ್ನು ಮಾತನಾಡಿಸಿತ್ತು. ಕಿಸ್ಮತುನ್ ವೀಡಿಯೊದಲ್ಲಿದ್ದ ವ್ಯಕ್ತಿಗಳಲ್ಲಿ ಓರ್ವ ಪೈಝಾನ್ ಎಂದು ದೃಢಪಡಿಸಿದ್ದರು. ಅಲ್ಲದೆ ತನ್ನ ಪುತ್ರ ಪೈಝಾನ್ ಪೊಲೀಸರ ಹಲ್ಲೆಯಿಂದ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದರು. ದಿಲ್ಲಿ ಉಚ್ಚ ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿರುವ ಮನವಿಯಲ್ಲಿ ಕಿಸ್ಮತುನ್, ತನ್ನ ಪುತ್ರ ಪೈಝಾನ್ ರಾತ್ರಿ ಸಾವನ್ನಪ್ಪುವ ಮೊದಲು ತನ್ನ ಮೇಲೆ ನಡೆದ ಹಲ್ಲೆಯನ್ನು ತಿಳಿಸಿರುವುದಾಗಿ ಹೇಳಿದ್ದಾರೆ. ಗಾಯಗೊಂಡ ಫೈಝಾನ್ ಅವರನ್ನು ಜ್ಯೋತಿನಗರ ಪೊಲೀಸ್ ಠಾಣೆಯಲ್ಲಿ ಕಾನೂನು ಬಾಹಿರವಾಗಿ ಇರಿಸಲಾಗಿತ್ತು ಹಾಗೂ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಲಾಗಿತ್ತು ಎಂದು ಮನವಿಯಲ್ಲಿ ಪ್ರತಿಪಾದಿಸಿರುವ ಬಗ್ಗೆ ‘ಲೈವ್ ಲಾ’ದ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News