ಅಗ್ರಿಗೋಲ್ಡ್ ಸಂಸ್ಥೆ ವಂಚನೆ ಹಗರಣ: 4,109 ಕೋಟಿ ಮೊತ್ತದ ಆಸ್ತಿ ಮುಟ್ಟುಗೋಲು

Update: 2020-12-24 18:04 GMT

ಹೈದರಾಬಾದ್, ಡಿ.24: ಆಂಧ್ರಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಸುಮಾರು 32 ಲಕ್ಷ ಜನರಿಂದ 6,000 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಿಸಿ ವಂಚನೆ ಎಸಗಿರುವ ಆರೋಪ ಎದುರಿಸುತ್ತಿರುವ ಅಗ್ರಿಗೋಲ್ಡ್ ಸಮೂಹ ಸಂಸ್ಥೆಗಳಿಗೆ ಸೇರಿದ 4,109 ಕೋಟಿ ರೂ. ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಸಂಸ್ಥೆಯ ಮೂವರು ನಿರ್ದೇಶಕರನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಬಂಧಿಸಿತ್ತು. ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ತಮಿಳುನಾಡು ಮತ್ತು ತೆಲಂಗಾಣದಲ್ಲಿರುವ ಆಸ್ತಿಗಳನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಗುರುವಾರ ಜಪ್ತಿ ಮಾಡಿಕೊಂಡ ಆಸ್ತಿಯಲ್ಲಿ 2,809 ಭೂ ಆಸ್ತಿ, ಆಂಧ್ರಪ್ರದೇಶದಲ್ಲಿರುವ ಹಾಯ್‌ಲ್ಯಾಂಡ್ ಅಮ್ಯೂಸ್‌ಮೆಂಟ್ ಪಾರ್ಕ್(48 ಎಕರೆ ಪ್ರದೇಶ), ವಿವಿಧ ಸಂಸ್ಥೆಗಳ ಶೇರುಗಳು, ಕಾರ್ಖಾನೆ ಮತ್ತು ಯಂತ್ರೋಪಕರಣಗಳು ಸೇರಿವೆ ಎಂದು ಜಾರಿ ನಿರ್ದೇಶನಾಲಯದ ಹೇಳಿಕೆ ತಿಳಿಸಿದೆ.

ಸುಮಾರು 32 ಲಕ್ಷ ಹೂಡಿಕೆದಾರರಿಂದ 6,380 ಕೋಟಿ ರೂ.ನಷ್ಟು ಹಣ ಸಂಗ್ರಹಿಸಿ ವಂಚಿಸಿರುವ ಬಗ್ಗೆ ಅಗ್ರಿಗೋಲ್ಡ್ ಸಂಸ್ಥೆಯ ವಿರುದ್ಧ ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಹಲವು ಪೊಲೀಸ್ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿದೆ. ಪ್ರಮುಖ ಆರೋಪಿಗಳಾದ , ಅಗ್ರಿ ಗೋಲ್ಡ್ ಕಂಪೆನಿಯ ನಿರ್ದೇಶಕರಾದ ಅವ್ವ ವೆಂಕಟರಾಮ ರಾವ್, ಅವ್ವ ವೆಂಕಟ ಎಸ್ ನಾರಾಯಣ ರಾವ್ ಮತ್ತು ಅವ್ವ ಹೇಮಸುಂದರ ವರಪ್ರಸಾದ್‌ರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಹೆಚ್ಚಿನ ಬಡ್ಡಿದರದ ಆಮಿಷವೊಡ್ಡಿ ಅಥವಾ ಅಭಿವೃದ್ಧಿಪಡಿಸಿದ ಸೈಟ್‌ಗಳನ್ನು ಆಕರ್ಷಕ ಬೆಲೆಯಲ್ಲಿ ಒದಗಿಸುವ ಆಕರ್ಷಣೆ ಮುಂದಿಟ್ಟು ಜನರಿಂದ ಹಣ ಸಂಗ್ರಹಿಸಲಾಗಿದೆ. ಇದಕ್ಕಾಗಿ ಹಲವು ನಕಲಿ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News