ಐಆರ್‌ಸಿಟಿಸಿಯ ಇ-ಟಿಕೆಟಿಂಗ್ ವೆಬ್‌ಸೈಟ್‌ನ್ನು ಮೇಲ್ದರ್ಜೆಗೇರಿಸಲು ರೈಲ್ವೆಯ ಕ್ರಮ

Update: 2020-12-25 14:40 GMT

 ಹೊಸದಿಲ್ಲಿ,ಡಿ.25: ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ಮುಂಗಡವಾಗಿ ಕಾದಿರಿಸುವುದನ್ನು ಇನ್ನಷ್ಟು ಸುಗಮಗೊಳಿಸಲು ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ)ನ ಇ-ಟಿಕೆಟಿಂಗ್ ವೆಬ್‌ಸೈಟ್‌ನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ರೈಲ್ವೆ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು.

ಹೆಚ್ಚಿನ ವೈಶಿಷ್ಟಗಳು ಮತ್ತು ಸರಳ ವಿನ್ಯಾಸದೊಂದಿಗೆ ಪ್ರಯಾಣಿಕರಿಗೆ ಟಿಕೆಟ್ ಕಾದಿರಿಸುವಿಕೆಯನ್ನು ಸುಗಮಗೊಳಿಸಲು ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲು ಇ-ಟಿಕೆಟಿಂಗ್ ವೆಬ್ ಸೈಟ್‌ನ್ನು ಸುಧಾರಿಸಲು ಭಾರತೀಯ ರೈಲ್ವೆಯು ಶ್ರಮಿಸುತ್ತಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ. ಇದೇ ವೇಳೆ ಗೋಯಲ್ ಅವರು ಇ-ಟಿಕೆಟಿಂಗ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯ ಪುನರ್‌ಪರಿಶೀಲನೆಯನ್ನು ನಡೆಸಿದರು.

ಭಾರತೀಯ ರೈಲ್ವೆಯು ನಿರ್ವಹಿಸುತ್ತಿರುವ ರೈಲುಗಳ ಪ್ರಯಾಣಿಕರಿಗೆ ಆನ್‌ಲೈನ್ ರಿಸರ್ವೇಷನ್ ಸೌಲಭ್ಯವನ್ನು ಐಆರ್‌ಸಿಟಿಸಿ ಇ-ಟಿಕೆಟಿಂಗ್ ವೆಬ್‌ಸೈಟ್ ಒದಗಿಸುತ್ತಿದೆ.

ಪ್ರಯಾಣಿಕರ ಟಿಕೆಟ್‌ಗಳ ಬುಕಿಂಗ್ ಮತ್ತು ಪ್ರಯಾಣ ಸೌಲಭ್ಯಗಳ ಅನುಭವವನ್ನು ಹೆಚ್ಚು ಉತ್ತಮಗೊಳಿಸಲು ಭಾರತೀಯ ರೈಲ್ವೆಯು 2014ರಿಂದಲೂ ಹೆಚ್ಚು ಒತ್ತು ನೀಡುತ್ತಿದೆ ಎಂದು ಹೇಳಿಕೆಯು ತಿಳಿಸಿದೆ.

ಭಾರತದಲ್ಲಿ ನೂತನ ಡಿಜಿಟಲ್ ಯುಗದಲ್ಲಿ ಹೆಚ್ಚೆಚ್ಚು ಜನರು ರಿಸರ್ವೇಷನ್ ಕೌಂಟರ್‌ಗಳಿಗೆ ತೆರಳುವ ಬದಲು ಆನ್‌ಲೈನ್‌ನಲ್ಲಿಯೇ ಟಿಕೆಟ್‌ಗಳನ್ನು ಕಾಯ್ದಿರಿಸು ತ್ತಾರೆ. ಹೀಗಾಗಿ ಐಆರ್‌ಸಿಟಿಸಿ ತನ್ನ ವೆಬ್‌ಸೈಟ್‌ನ್ನು ನಿರಂತರವಾಗಿ ಮೇಲ್ದರ್ಜೆಗೇರಿಸುವುದು ಅಗತ್ಯವಾಗಿದೆ ಎಂದು ಗೋಯಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News