×
Ad

ರೈತರಿಂದ ಹರ್ಯಾಣದಲ್ಲಿ ಟೋಲ್ ಸಂಗ್ರಹಕ್ಕೆ ತಡೆ,

Update: 2020-12-25 21:26 IST

ಚಂಡಿಗಢ, ಡಿ. 25: ಭಾರತೀಯ ಕಿಸಾನ್ ಒಕ್ಕೂಟದ ಕರೆಯಂತೆ ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಹರ್ಯಾಣದ ಹೆಚ್ಚಿನ ಹೆದ್ದಾರಿಗಳಲ್ಲಿ ಶುಕ್ರವಾರ ಟೋಲ್ ಸಂಗ್ರಹವನ್ನು ತಡೆದಿದ್ದಾರೆ.

ರಾಜ್ಯದ ಹಲವು ಟೋಲ್ ಪ್ಲಾಝಾಗಳಲ್ಲಿ ಮಧ್ಯರಾತ್ರಿ ಅಥವಾ ಶುಕ್ರವಾರ ಬೆಳಗ್ಗೆ ಟೋಲ್ ಸಂಗ್ರಹಕ್ಕೆ ರೈತರು ತಡೆ ಒಡ್ಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ಸ್ಥಳಗಳಲ್ಲಿ ರೈತರು ಟೋಲ್ ಪ್ಲಾಝಾಗಳನ್ನು ಆಕ್ರಮಿಸಿದರು ಹಾಗೂ ಅಧಿಕಾರಿಗಳು ಪ್ರಯಾಣಿಕರಿಂದ ಟೋಲ್ ಸಂಗ್ರಹಿಸುವುದನ್ನು ತಡೆದರು. ಇತರ ಕೆಲವು ಸ್ಥಳಗಳಲ್ಲಿ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಟೋಲ್ ಪ್ಲಾಝಾದ ಉದ್ಯೋಗಿಗಳೇ ಟೋಲ್ ಸಂಗ್ರಹ ಪ್ರಕ್ರಿಯೆ ರದ್ದುಗೊಳಿಸಿದರು ಎನ್ನಾಲಾಗಿದೆ.

 ಕರ್ನಾಲ್ ಬಸ್ತಾರ್‌ನ ರಾಷ್ಟ್ರೀಯ ಹೆದ್ದಾರಿ-44ರಲ್ಲಿರುವ ಟೋಲ್ ಫ್ಲಾಝಾದಲ್ಲಿ ಟೋಲ್ ಸಂಗ್ರಹವನ್ನು ರೈತರು ತಡೆದರು. ಇದಲ್ಲದೆ, ಕರ್ನಾಲ್-ಜಿಂದ್ ಹೆದ್ದಾರಿಯಲ್ಲಿರುವ ಟೋಲ್ ಪ್ಲಾಝಾ, ಸಿರ್ಸಾ ಜಿಲ್ಲೆಯ ದೇಬ್‌ವಾಲಿಯಲ್ಲಿರುವ ಖುಯಿಯನ್ ಮಲ್ಕಾನ ಟೋಲ್ ಪ್ಲಾಝಾ, ರೋಹ್ಟಕ್-ಪಾಣಿಪತ್ ಹೆದ್ದಾರಿಯ ಮಕ್ರುಲಿ ಕಲಾನ್‌ನಲ್ಲಿರುವ ಟೋಲ್ ಪ್ಲಾಝಾಗಳಲ್ಲಿ ಕೂಡ ರೈತರು ಟೋಲ್ ಸಂಗ್ರಹ ತಡೆದರು.

ಈ ನಡುವೆ ಪಂಜಾಬ್‌ನ ಮಾನ್ಸಾದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಇಲ್ಲಿನ ರಿಲಯನ್ಸ್ ಜಿಯೋದ ಹಲವು ಟವರ್‌ಗಳಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದರು. ಇದರಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಜಿಯೋ ಸೇವೆಗೆ ಅಡೆತಡೆ ಉಂಟಾಗಿದೆ.

ಕರಾಳ ಕಾಯ್ದೆಯನ್ನು ಹಿಂದೆಗೆಯುವ ವರೆಗೆ ವಿದ್ಯುತ್ ಪೂರೈಕೆಯನ್ನು ಮರು ಆರಂಭಿಸುವುದಿಲ್ಲ ಎಂದು ಓರ್ವ ಪ್ರತಿಭಟನೆಕಾರ ಅವತಾರ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News