ಚೀನಾದ ಕೊರೋನ ಲಸಿಕೆಯನ್ನು ಬಳಸಲು ನಿರ್ಧರಿಸಿದ ಟರ್ಕಿ

Update: 2020-12-25 16:05 GMT

ಇಸ್ತಾಂಬುಲ್ (ಟರ್ಕಿ), ಡಿ. 25: ಕೊರೋನ ವೈರಸ್ ವಿರುದ್ಧ ರಕ್ಷಣೆಗಾಗಿ ಚೀನಾದ ಸಿನೊವ್ಯಾಕ್ ಲಸಿಕೆಯನ್ನು ಬಳಸಲು ಟರ್ಕಿ ನಿರ್ಧರಿಸಿದೆ ಎಂದು ದೇಶದ ಆರೋಗ್ಯ ಸಚಿವ ಫಹ್ರಿತಿನ್ ಕೊಕಾ ಗುರುವಾರ ಹೇಳಿದ್ದಾರೆ.

ಚೀನಾದ ಲಸಿಕೆಯು 91 ಶೇಕಡ ಪರಿಣಾಮಕಾರಿಯಾಗಿದೆ ಎನ್ನುವುದು ಆ ದೇಶದಲ್ಲಿ ನಡೆದ ಪ್ರಾಥಮಿಕ ಪರೀಕ್ಷೆಗಳಿಂದ ಸಾಬೀತಾಗಿದೆ ಹಾಗೂ ಮೊದಲ ಸರಕು ಕೆಲವೇ ದಿನಗಳಲ್ಲಿ ಟರ್ಕಿಗೆ ಆಗಮಿಸಿಲಿದೆ ಎಂದರು.

ಅದೂ ಅಲ್ಲದೆ, 45 ಲಕ್ಷ ಕೊರೋನ ವೈರಸ್ ಲಸಿಕಾ ಡೋಸ್‌ಗಳಿಗಾಗಿ ಟರ್ಕಿಯು ಫೈಝರ್-ಬಯೋಎನ್‌ಟೆಕ್ ಜೊತೆಗೂ ಕೆಲವೇ ದಿನಗಳಲ್ಲಿ ಒಪ್ಪಂದವೊಂದನ್ನು ಮಾಡಿಕೊಳ್ಳಲಿದೆ. ಮುಂದಿನ ದಿನಗಳಲ್ಲಿ ಆ ಕಂಪೆನಿಯಿಂದ ಇನ್ನೂ 3 ಕೋಟಿ ಡೋಸ್‌ಗಳನ್ನು ಖರೀದಿಸುವ ಆಯ್ಕೆಯೂ ಮುಕ್ತವಾಗಿದೆ ಎಂದು ಟರ್ಕಿ ಆರೋಗ್ಯ ಸಚಿವ ನುಡಿದರು.

ಟರ್ಕಿಯು ತನ್ನ ಲಸಿಕಾ ಅಭಿಯಾನವನ್ನು ಮುಂದಿನ ತಿಂಗಳು ಆರಂಭಿಸಲಿದ್ದು, ಆರಂಭದಲ್ಲಿ ಚೀನಾದಿಂದ 30 ಲಕ್ಷ ಲಸಿಕೆಗಳನ್ನು ಪಡೆಯಲಿದೆ ಹಾಗೂ ಮುಂದಿನ ದಿನಗಳಲ್ಲಿ ಇನ್ನೂ 5 ಕೋಟಿ ಡೋಸ್‌ಗಳನ್ನು ಪಡೆಯುವ ಅವಕಾಶವನ್ನು ಮುಕ್ತವಾಗಿರಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News