ಪ್ರತಿಭಟನೆಯ ನಡುವೆ ರೈತ ನಾಯಕರಿದ್ದ ವೇದಿಕೆಗೆ ನುಗ್ಗಲೆತ್ನಿಸಿದ ಆರೆಸ್ಸೆಸ್ ಕಾರ್ಯಕರ್ತನ ಬಂಧನ

Update: 2020-12-25 18:00 GMT

ಹೊಸದಿಲ್ಲಿ,ಡಿ.25: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಯ ನಡುವೆಯೇ ಕೇಂದ್ರ ಸರಕಾರದ ಪರ ಕರಪತ್ರ ಹಂಚುತ್ತಿದ್ದ ಹಾಗೂ ರೈತ ನಾಯಕರು ಉಪಸ್ಥಿತರಿದ್ದ ವೇದಿಕೆಯೆಡೆಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೋರ್ವನನ್ನು ಸ್ವಯಂ ಸೇವಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ವಯಂ ಸೇವಕರು ಪ್ರಶ್ನಿಸಿದಾಗ ಆತ ಆರೆಸ್ಸೆಸ್ ಕಾರ್ಯಕರ್ತನೆಂದು ತಿಳಿದು ಬಂದಿದೆ ಎಂದು ಮೂಲಗಳು ‘varthabharati.in ಗೆ ತಿಳಿಸಿದೆ.

ರೈತರ ಪ್ರತಿಭಟನೆ ನಡೆಯುತ್ತಿದ್ದ ವೇಳೆ ರೈತ ನಾಯಕರಿದ್ದ ವೇದಿಕೆಯೆಡೆಗೆ ಕೇಂದ್ರ ಸರಕಾರದ ನೂತನ ಕೃಷಿ ಮಸೂದೆಯ ಪರವಿದ್ದ ಕರಪತ್ರಗಳು ಹಾಗೂ ಪ್ರತಿಭಟನೆ ನಡೆಸುತ್ತಿರುವ ರೈತರು ದೇಶದ್ರೋಹಿಗಳು ಮುಂತಾದ ಬರಹಗಳಿದ್ದ ಕರಪತ್ರಗಳನ್ನು ಹಿಡಿದು ಬ್ಯಾರಿಕೇಡ್ ಹಾರಿ ಮುನ್ನುಗ್ಗಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಇಂತಹಾ ನುಸುಳುಕೋರರನ್ನು ಪತ್ತೆ ಹಚ್ಚಲು ಸ್ವಯಂಸೇವಕರ ಸಂಘವೊಂದು ತಯಾರಾಗಿ ನಿಂತಿದ್ದು, ಅವರು ಕೂಡಲೇ ಆತನನ್ನು ತಡೆದು ಪ್ರಶ್ನಿಸಿದ್ದಾರೆ.

ಯೂಟ್ಯೂಬ್ ಮುಖಾಂತರ ಸುದ್ದಿ ಪ್ರಕಟಿಸುವ ಪತ್ರಕರ್ತ ಸಿಮ್ರನ್ ಜಿತ್ ಜೋಟ್ ಮಕ್ಕರ್ ಎಂಬವರು ಈ ವ್ಯಕ್ತಿಯನ್ನು ಪ್ರಶ್ನಿಸಿದ ವೀಡಿಯೋ ಸದ್ಯ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ. ಈ ಪ್ರಕರಣದ ಕುರಿತು ಸಿಮ್ರನ್ ಜಿತ್ ಜೋಟ್ ‘ವಾರ್ತಾಭಾರತಿ’ಯ ವರದಿಗಾರರೊಂದಿಗೆ ಮಾತನಾಡಿದ್ದು, ‘ಆತನನ್ನು ವಿಚಾರಣೆ ನಡೆಸಿದಾಗ ಆತ ಆರೆಸ್ಸೆಸ್ ಕಾರ್ಯಕರ್ತ ಎಂದು ಒಪ್ಪಿಕೊಂಡಿದ್ದಾನೆ. ಹಣಕ್ಕಾಗಿಯೇ ಈ ಕೆಲಸ ಮಾಡುತ್ತಿದ್ದೇನೆ. ಕಳೆದ ಒಂದು ವರ್ಷದಿಂದ ಆರೆಸ್ಸೆಸ್ ನಿಂದ ತರಬೇತಿ ಪಡೆಯುತ್ತಿದ್ದೇನೆ.  ಜನರಿಗೆ ಮೋದಿ ಸರಕಾರದ ಕುರಿತು ಉತ್ತಮ ಭಾವನೆ ಬರುವಂತೆ ಮಾಡುವುದೇ ನಮ್ಮ ಕೆಲಸ” ಎಂದು ಆತ ಹೇಳಿದ್ದಾಗಿ ಸಿಮ್ರನ್ ಜಿತ್ ತಿಳಿಸಿದ್ದಾರೆ.

“ಇಂತಹಾ ಹಲವಾರು ಮಂದಿ ಪ್ರತಿದಿನ ಪ್ರತಿಭಟನೆಯ ನಡುವೆ ಬಂದು ಕೇಂದ್ರ ಸರಕಾರದ ಪರ ಮತ್ತು ನರೇಂದ್ರ ಮೋದಿಯ ಪರ ಕರಪತ್ರಗಳನ್ನು ಹಂಚುವುದು ಮತ್ತು ಪ್ರತಿಭಟನಕಾರರಿಗೆ ತೊಂದರೆ ನೀಡುವ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಅವರನ್ನು ನಿಯಂತ್ರಿಸಲೆಂದೇ ಸ್ವಯಂಸೇವಕರ ತಂಡವಿದೆ. ಇನ್ನು ಈತನನ್ನು ಹಿಡಿದು ಸ್ವಯಂ ಸೇವಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೆಲವೊಂದು ಸಾಮಾಜಿಕ ತಾಣದಲ್ಲಿ ಆತ ಖಲಿಸ್ತಾನ್ ಬೆಂಬಲಿಸಿ ಕರಪತ್ರ ಹಂಚುತ್ತಿದ್ದಾನೆ ಎಂಬ ಆರೋಪವಿದೆ. ಅದು ಸುಳ್ಳು. ಈ ಕುರಿತಾದಂತೆ ಈಗಾಗಲೇ ಕುಂಡ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪತ್ರಕರ್ತ ಸಿಮ್ರನ್ ಜಿತ್ ಜೋಟ್ 'ವಾರ್ತಾಭಾರತಿ'ಗೆ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News