ಮಧ್ಯಪ್ರದೇಶದಲ್ಲಿ ಮತಾಂತರ ವಿರೋಧಿ ಮಸೂದೆ ಅಂಗೀಕಾರ: ಗರಿಷ್ಠ 10 ವರ್ಷ ಜೈಲು ಶಿಕ್ಷೆ

Update: 2020-12-26 14:07 GMT

ಭೋಪಾಲ,ಡಿ.26: ಮಧ್ಯಪ್ರದೇಶ ಸಚಿವ ಸಂಪುಟವು ‘ಧಾರ್ಮಿಕ ಸ್ವಾತಂತ್ರ ಮಸೂದೆ ’ಗೆ ಒಪ್ಪಿಗೆ ನೀಡಿದ್ದು,ಮದುವೆ ಅಥವಾ ಇತರ ಯಾವುದೇ ಮೋಸದ ಮೂಲಕ ಮತಾಂತರಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ.ಗಳ ದಂಡವನ್ನು ವಿಧಿಸಲು ಮಸೂದೆಯು ಅವಕಾಶವನ್ನು ಕಲ್ಪಿಸಿದೆ ಎಂದು ರಾಜ್ಯದ ಗೃಹಸಚಿವ ನರೋತ್ತಮ ಮಿಶ್ರಾ ಅವರು ಶನಿವಾರ ಇಲ್ಲಿ ತಿಳಿಸಿದರು. ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ,ಇದು ವಂಚನೆ, ಆಮಿಷ ಅಥವಾ ಬೆದರಿಕೆಯ ಮೂಲಕ ನಡೆಸಲಾದ ಧಾರ್ಮಿಕ ಮತಾಂತರದ ವಿರುದ್ಧ ದೇಶದಲ್ಲಿಯೇ ಅತ್ಯಂತ ಕಠಿಣ ಕಾನೂನಾಗಲಿದೆ ಎಂದು ತಿಳಿಸಿದರು. ಈ ಮೊದಲು ಮಿಶ್ರಾ ಕಾನೂನಿನಡಿ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಹೇಳಿದ್ದರು.

ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರದ ಬಳಿಕ ಈ ಮಸೂದೆಯು 1968ರ ಧಾರ್ಮಿಕ ಸ್ವಾತಂತ್ರ ಕಾಯ್ದೆಯ ಬದಲಾಗಿ ಅನುಷ್ಠಾನಗೊಳ್ಳಲಿದೆ ಎಂದ ಅವರು,ಕೇವಲ ಮತಾಂತರದ ಉದ್ದೇಶಕ್ಕಾಗಿಯೇ ನಡೆಸಲಾದ ಮದುವೆಯು ನೂತನ ಕಾನೂನಿನಡಿ ಅನೂರ್ಜಿತಗೊಳ್ಳಲಿದೆ ಎಂದರು.

ಮತಾಂತರಗೊಳ್ಳಲು ಬಯಸುವವರು ಎರಡು ತಿಂಗಳು ಮೊದಲು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದೂ ಮಿಶ್ರಾ ತಿಳಿಸಿದರು.

ಇತ್ತೀಚಿನವರೆಗೂ ‘ಲವ್ ಜಿಹಾದ್’ ಶಬ್ದಕ್ಕೆ ದೇಶದ ಯಾವುದೇ ಕಾನೂನು ವ್ಯವಸ್ಥೆಯಲ್ಲಿ ಮಾನ್ಯತೆಯಿರಲಿಲ್ಲ. ಹಿಂದು ಮಹಿಳೆಯರನ್ನು ಇಸ್ಲಾಮ್‌ಗೆ ಮತಾಂತರಿಸಲು ಕಲ್ಪಿತ ಮುಸ್ಲಿಮ್ ಒಳಸಂಚನ್ನು ಬಣ್ಣಿಸಲು ಸಂಘ ಪರಿವಾರ ಸಂಘಟನೆಗಳು ಈ ಶಬ್ದವನ್ನು ಚಾಲ್ತಿಗೆ ತಂದಿದ್ದವು.

ವ್ಯಕ್ತಿಯು ತನ್ನಿಷ್ಟದವರನ್ನು ಮದುವೆಯಾಗುವ ಹಕ್ಕನ್ನು ಸಂವಿಧಾನದ 21ನೇ ವಿಧಿಯು ಖಾತರಿ ಪಡಿಸಿದ್ದರೂ ಉತ್ತರ ಪ್ರದೇಶವು ಈಗಾಗಲೇ ‘ಲವ್ ಜಿಹಾದ್’ ವಿರುದ್ಧ ಕಾನೂನನ್ನು ತಂದಿದೆ. ಹರ್ಯಾಣವೂ ಅದಕ್ಕೆ ಸಜ್ಜಾಗಿದೆ. ತಿಂಗಳ ಹಿಂದಷ್ಟೇ ಅಂಗೀಕಾರಗೊಂಡಿರುವ ಉತ್ತರ ಪ್ರದೇಶದ ‘ಲವ್ ಜಿಹಾದ್’ ಕಾನೂನು ಹಲವಾರು ಮುಸ್ಲಿಮ್ ಪುರುಷರನ್ನು ಬಂಧಿಸಲು ಮತ್ತು ಅಂತರಧರ್ಮೀಯ ದಂಪತಿಗಳು ತಾವು ಪರಸ್ಪರ ಒಪ್ಪಿಕೊಂಡೇ ಮದುವೆಯಾಗಿದ್ದೇವೆ ಎಂದು ಹೇಳಿದರೂ ಅವರಿಗೆ ಕಿರುಕುಳ ನೀಡಲು ಬಳಕೆಯಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News