ರಜನಿಕಾಂತ್ ಆರೋಗ್ಯದ ಕುರಿತು ಹೇಳಿಕೆ ಬಿಡುಗಡೆಗೊಳಿಸಿದ ಅಪೋಲೊ ಆಸ್ಪತ್ರೆ

Update: 2020-12-26 07:19 GMT

ಹೈದರಾಬಾದ್,ಡಿ.26: ಅಧಿಕ ರಕ್ತದೊತ್ತಡದ ಕಾರಣದಿಂದ ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರುಂಟಾದ ಕಾರಣ ನಿನ್ನೆ ಹೈದರಾಬಾದ್ ನ ಅಪೋಲೊ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ರಜನಿಕಾಂತ್ ಆರೋಗ್ಯದ ಕುರಿತು ಹೇಳಿಕೆ ಬಿಡುಗಡೆಗೊಳಿಸಿದ ಆಸ್ಪತ್ರೆಯು, ರಜನಿಕಾಂತ್ ಚೇತರಿಸಿಕೊಳ್ಳುತ್ತಿದ್ದಾರೆ, ಆದರೆ ಅವರ ರಕ್ತದೊತ್ತಡ ಪ್ರಮಾಣ ಅಧಿಕವಾಗಿಯೇ ಇದೆ ಎಂದು ಹೇಳಿಕೆ ಬಿಡುಗಡೆಗೊಳಿಸಿದೆ.

“ರಜನಿಕಾಂತ್ ರವರು ಚೇತರಿಸಿಕೊಳ್ಳುತ್ತಿದ್ದರೂ ಅವರ ರಕ್ತದೊತ್ತಡ ಅಧಿಕವಾಗಿಯೇ ಇದೆ. ಈ ಕಾರಣದಿಂದಾಗಿ ಅವರನ್ನು ತೀವ್ರ ನಿಗಾದೊಂದಿಗೆ ಆರೈಕೆ ಮಾಡಲಾಗುತ್ತಿದೆ. ಅವರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದು, ಅಧಿಕ ವಿಶ್ರಾಂತಿಯ ಅವಶ್ಯಕತೆಯಿದೆ. ಆದ್ದರಿಂದ ಸದ್ಯಕ್ಕೆ ಯಾರಿಗೂ ಅವರ ಭೇಟಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ತನ್ನ ಪ್ರಕಟನೆಯಲ್ಲಿ ಅಪೋಲೊ ಆಸ್ಪತ್ರೆ ತಿಳಿಸಿದೆ.

ಆಸ್ಪತ್ರೆಗೆ ದಾಖಲಿಸಿದ ಕೂಡಲೇ ರಜನೀಕಾಂತ್ ರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ನೆಗೆಟಿವ್ ರಿಪೋರ್ಟ್ ಬಂದಿದೆ ಮತ್ತು ಅವರಿಗೆ ಯಾವುದೇ ಕೋವಿಡ್ ಲಕ್ಷಣಗಳು ಕಂಡು ಬಂದಿರಲಿಲ್ಲ ಎಂದು ನಿನ್ನೆಯ ಪ್ರಕಟನೆಯಲ್ಲಿ ಅಪೋಲೊ ಆಸ್ಪತ್ರೆ ಹೇಳಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News