ಪಾಕಿಸ್ತಾನಕ್ಕೆ 50 ಸಶಸ್ತ್ರ ಡ್ರೋನ್ ಗಳನ್ನು ಪೂರೈಸಲಿರುವ ಚೀನಾ
ಹೊಸದಿಲ್ಲಿ,ಡಿ.26: ಪಾಕಿಸ್ತಾನಕ್ಕೆ ಚೀನಾ 50 ವಿಂಗ್ ಲೂಂಗ್ II ಸಶಸ್ತ್ರ ಡ್ರೋನ್‍ಗಳನ್ನು ಪೂರೈಸಲಿದೆ ಎಂದು ಚೀನಾದ ಸರಕಾರಿ ಮಾಧ್ಯಮ ಇತ್ತೀಚೆಗೆ ಮಾಹಿತಿ ನೀಡಿದ್ದು, ಎತ್ತರದ ಪ್ರದೇಶಗಳಲ್ಲಿ ನಿಯೋಜಿಸಲ್ಪಟ್ಟಿರುವ ಭಾರತೀಯ ಮಿಲಿಟರಿಗೆ ಈ ಡ್ರೋನ್‍ಗಳು ಸಿಂಹ ಸ್ವಪ್ನವಾಗಲಿವೆ ಎಂದು ಹೇಳಿಕೆ ನೀಡಿದೆ.
ಚೀನಾ ಮತ್ತು ಟರ್ಕಿಯ ಸಶಸ್ತ್ರ ಡ್ರೋನ್‍ಗಳು ಈ ಹಿಂದೆ ಲಿಬಿಯಾ, ಸಿರಿಯಾ ಮತ್ತು ಅಝೆರ್ಬೈಜಾನ್ ಸಂಘರ್ಷಗಳಲ್ಲಿಯೂ ವಿರೋಧಿಗಳನ್ನು ಮಟ್ಟ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದು ಹೇಳಿದ ಚೀನಾದ ಮಾಧ್ಯಮ, ದೊಡ್ಡ ಸಂಖ್ಯೆಯ ಡ್ರೋನ್ ದಾಳಿಗಳನ್ನು ಭಾರತೀಯ ಮಿಲಿಟರಿ ಸರಿಗಟ್ಟಲು ಸಾಧ್ಯವಿಲ್ಲ ಎಂದೂ ವಾದಿಸಿದೆ.
ಈ ಸಶಸ್ತ್ರ ಡ್ರೋನ್‍ಗಳ ಸಾಮರ್ಥ್ಯವನ್ನು ಒಪ್ಪಬಹುದಾದರೂ ಅವುಗಳು ವಾಯು ಮಾರ್ಗದಲ್ಲಿ ಪ್ರಾಬಲ್ಯ ಹೊಂದಿರುವ ಕಡೆಗಳಲ್ಲಿ ಮಾತ್ರ ಗರಿಷ್ಠವಾಗಿ ಪರಿಣಾಮಕಾರಿಯಾಗಬಹುದೆಂದು ಭಾರತೀಯ ಮಿಲಿಟರಿ ಅಧಿಕಾರಿಗಳು ಹೇಳುತ್ತಿದ್ದಾರೆ. ಅಫ್ಘಾನಿಸ್ತಾನ್ ಮತ್ತು ಇರಾಕ್‍ನಲ್ಲಿ ಅಲ್ಲಿನ ನುಸುಳುಕೋರರು ಹಾಗೂ ಉಗ್ರರ ವಿರುದ್ಧ ಅಮೆರಿಕಾ ಯಶಸ್ವೀ ಡ್ರೋನ್ ದಾಳಿ ನಡೆಸಲು ಅಲ್ಲಿನ ವಾಯು ಮಾರ್ಗದಲ್ಲಿ ಅಮೆರಿಕಾಗಿದ್ದ ಪ್ರಾಬಲ್ಯ ಕಾರಣ. ಆದರೆ ಚೀನಾ ಅಥವಾ ಪಾಕಿಸ್ತಾನಕ್ಕೆ ಭಾರತದ ಗಡಿಯಲ್ಲಿ ಈ ರೀತಿಯ ದಾಳಿ ನಡೆಸಲು ಸಾಧ್ಯವಿಲ್ಲ. ಅಲ್ಲಿ ವಾಯು ಮಾರ್ಗದ ಮೇಲೆ ಸದಾ ನಿಗಾ ಇಡಲಾಗುತ್ತದೆ ಎಂದು ಭಾರತೀಯ ವಾಯು ಪಡೆಯ ಮಾಜಿ ಮುಖ್ಯಸ್ಥರು ಹೇಳಿದ್ದಾರೆ.
ಆದರೆ ಸದ್ಯ ಭಾರತದ ಬಳಿ ಸಶಸ್ತ್ರ ಡ್ರೋನ್ ಇಲ್ಲದೇ ಇರುವುದರಿಂದ ಹಾಗೂ ಪಾಕಿಸ್ತಾನ ಇಂತಹ ಡ್ರೋನ್‍ಗಳನ್ನು ಹೊಂದುವುದರಿಂದ ಭಾರತ ಕೂಡ ಇಂತಹ ಡ್ರೋನ್‍ಗಳನ್ನು ಹೊಂದುವುದು ಅಗತ್ಯವಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯ ಪಡುತ್ತಾರೆ.