ನಿವೃತ್ತಿ ಹೊಂದಿ ನಾಲ್ಕು ವರ್ಷಗಳ ಬಳಿಕ ವೈದ್ಯಕೀಯ ಕಾಲೇಜಿಗೆ ದಾಖಲಾತಿ ಪಡೆದ 64 ವರ್ಷದ ಹಿರಿಯ ವ್ಯಕ್ತಿ

Update: 2020-12-26 08:26 GMT
photo: Hindustan Times

ಭುವನೇಶ್ವರ್,ಡಿ.26: ಒಡಿಶಾದ ಬರ್ಘರ್ ಜಿಲ್ಲೆಯ ನಿವಾಸಿಯಾಗಿರುವ ಜಯ್ ಕಿಶೋರ್ ಓರ್ವ ನಿವೃತ್ತಗೊಂಡಿರುವ ಬ್ಯಾಂಕ್ ಅಧಿಕಾರಿ. ಆದರೂ ವಿದ್ಯಾರ್ಜನೆಗೆ ವಯಸ್ಸು ಯಾವತ್ತೂ ಅಡ್ಡಿಯಾಗದು ಎಂಬುದಕ್ಕೆ ಇವರೊಂದು ಜೀವಂತ ನಿದರ್ಶನ. ತಮ್ಮ 64ನೇ ವಯಸ್ಸಿನಲ್ಲಿ ಅವರು ಎಂಬಿಬಿಎಸ್ ಶಿಕ್ಷಣ ಪಡೆಯಲು ನಿರ್ಧರಿಸಿದ್ದಾರೆ ಮತ್ತು ಅವರಿಗೆ ಅವಕಾಶವೂ ದೊರಕಿದೆ. ಈ ಕುರಿತಾದಂತೆ indiatimes.com ವರದಿ ಮಾಡಿದೆ.

ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತಿಗೊಂಡ ನಾಲ್ಕು ವರ್ಷಗಳ ನಂತರ ಪ್ರಧಾನ್ ಅವರು ನೀಟ್ ತೇರ್ಗಡೆಗೊಂಡು  ಬುರ್ಲಾ ಎಂಬಲ್ಲಿನ ಸವೀರ್ ಸುರೇಂದ್ರ ಸಾಯಿ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್  ಆ್ಯಂಡ್ ರಿಸರ್ಚ್ ಎಂಬ ಸರಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಾತಿ ಪಡೆದಿದ್ದಾರೆ.

ನಾಲ್ಕು ದಶಕಗಳ ಸೇವೆಯ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಮ್ಯಾನೇಜರ್ ಆಗಿ ನಿವೃತ್ತರಾಗಿರುವ ಇವರು ವೈದ್ಯರಾಗುವುದು ತಮ್ಮ ದೀರ್ಘಕಾಲದ ಈಡೇರದ ಕನಸು, ಈಗ ಅದನ್ನು ನನಸಾಗಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳುತ್ತಾರೆ.

ವಿದ್ಯಾರ್ಥಿಯಾಗಿದ್ದಾಗ ಒಮ್ಮೆ ಎಂಬಿಬಿಎಸ್ ಶಿಕ್ಷಣಕ್ಕಾಗಿ ಅವರು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರೂ ತೇರ್ಗಡೆಯಾಗಲು ವಿಫಲರಾಗಿದ್ದರು. ಜತೆಗೆ ಕುಟುಂಬದ ಹಿರಿಯ ಮಗನಾಗಿ ಆದಷ್ಟು ಬೇಗ  ಉದ್ಯೋಗ ಪಡೆಯುವುದೂ ಅವರಿಗೆ ಅಗತ್ಯವಾಗಿತ್ತು. ಮುಂದೆ 1983ರಲ್ಲಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇವೆಗೆ ಸೇರಿದ್ದರೂ ತಮ್ಮ ವೈದ್ಯರಾಗುವ ಕನಸನ್ನು ಈಡೇರಿಸುವ ಛಲ ಮಾತ್ರ ಕಡಿಮೆಯಾಗಿರಲಿಲ್ಲ.

ನೀಟ್ ಪರೀಕ್ಷೆಗೆ ಹಾಜರಾಗಲು ಗರಿಷ್ಠ ವಯಸ್ಸು 25 ಆಗಿದ್ದರೂ ಈ ಕುರಿತಾದ ಪ್ರಕರಣವೊಂದು ನ್ಯಾಯಾಲಯದಲ್ಲಿರುವುದರಿಂದ ಅವರಿಗೆ ಈ ಪ್ರವೇಶ ಪರೀಕ್ಷೆ ಬರೆಯುವುದು ಸಾಧ್ಯವಾಯಿತು ಎಂದು ತಿಳಿದು ಬಂದಿದೆ.

ಎಂಬಿಬಿಎಸ್ ಶಿಕ್ಷಣ ಪಡೆಯಲು ಯಾವುದೇ ವಯೋಮಿತಿಯಿಲ್ಲ. ಆದರೆ ಪ್ರವೇಶ ಪಡೆದ ಕಾಲೇಜಿನ ಪ್ರಾಂಶುಪಾಲ ಮತ್ತು ಡೀನ್ ಬೃಜ್‍ಮೋಹನ್ ಮಿಶ್ರಾ ಅವರು ಹೇಳುವಂತೆ ಪ್ರಧಾನ್ ಅವರು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ದಾಖಲಾತಿ ಪಡೆದ ಅತ್ಯಂತ ಹಿರಿಯ ವಿದ್ಯಾರ್ಥಿ ಎಂದು ಹೇಳಿದ್ದಾರೆ.

ಪ್ರಧಾನ್ ಅವರಿಗೆ ಮೂವರು ಮಕ್ಕಳಿದ್ದಾರೆ. ಬಿಎಸ್‍ಡಿ ವಿದ್ಯಾರ್ಥಿನಿಯರಾಗಿದ್ದ ಅವರ ಅವಳಿ ಪುತ್ರಿಯರು ತಮ್ಮ ತಂದೆಯ ಕನಸು ಈಡೇರಿಸಲು ಅವರನ್ನು ಹುರಿದುಂಬಿಸಿದ್ದರೂ ಅವರು ವೈದ್ಯಕೀಯ ಶಿಕ್ಷಣ ಕೋರ್ಸಿಗೆ ದಾಖಲಾತಿ ಪಡೆದ ಖುಷಿ ಕ್ಷಣವನ್ನು ಅನುಭವಿಸಲು ಅವರ ಒಬ್ಬ ಪುತ್ರಿ ಇಲ್ಲದೇ ಇರುವುದು ಅವರಿಗೆ ದುಃಖ ನೀಡಿದೆ. ಪ್ರಧಾನ್ ಅವರ ಅವಳಿ ಪುತ್ರಿಯರಲ್ಲೊಬ್ಬರು ನವೆಂಬರ್ ತಿಂಗಳಲ್ಲಿ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News