ನಕಲಿ ಎನ್‌ಕೌಂಟರ್ ಆರೋಪ: ಸೇನಾಧಿಕಾರಿ ಸಹಿತ ಮೂವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

Update: 2020-12-27 17:11 GMT

ಶ್ರೀನಗರ, ಡಿ. 27: ದಕ್ಷಿಣ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ನಕಲಿ ಎನ್‌ಕೌಂಟರ್ ಆರೋಪಕ್ಕೆ ಸಂಬಂಧಿಸಿ ಸೇನಾಧಿಕಾರಿ ಸಹಿತ ಮೂವರ ವಿರುದ್ಧ ಜಮ್ಮು ಹಾಗೂ ಕಾಶ್ಮೀರ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಶೋಪಿಯಾನದ ಪ್ರಾಥಮಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಿಗೆ ವಿಶೇಷ ತನಿಖಾ ತಂಡದ ಮುಖ್ಯಸ್ಥರು ಶನಿವಾರ ದೋಷಾರೋಪ ಪಟ್ಟಿ ಸಲ್ಲಿಸಿದರು.

ರಾಜೌರಿ ಜಿಲ್ಲೆಯ ಶೋಪಿಯಾನದ ಅಂಶಿಪೋರಾದ ತೋಟದಲ್ಲಿ ಜುಲೈಯಲ್ಲಿ ಮೂವರು ಸೋದರ ಸಂಬಂಧಿಗಳ ವಿರುದ್ಧ ಪಿತೂರಿ ನಡೆಸಿದ, ಅಪಹರಿಸಿದ ಹಾಗೂ ಹತ್ಯೆಗೈದ ದೋಷಾರೋಪವನ್ನು ಆರೋಪಿಗಳ ಮೇಲೆ ಹೊರಿಸಲಾಗಿದೆ.

ಜುಲೈ18ರಂದು ನಡೆದ ಈ ಎನ್‌ಕೌಂಟರ್‌ನಲ್ಲಿ ತನ್ನ ತಂಡ ಭಾಗಿಯಾಗಿರುವುದಾಗಿ ಸೇನೆ ನಡೆಸಿದ ತನಿಖೆ ದೋಷಾರೋಪ ಹೊರಿಸಿತ್ತು. ಆರೋಪಿಗಳ ವಿರುದ್ಧ ಸೇನಾ ಕಾಯ್ದೆ ಅಡಿಯಲ್ಲಿ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸೇನೆ ಹೇಳಿತ್ತು.

ವಿವಾದಾತ್ಮಕ ಎನ್‌ಕೌಂಟರ್ ನಡೆದ ದಿನಗಳ ಬಳಿಕ, ಪಾಕಿಸ್ತಾನ ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಹಾಗೂ ಶೋಪಿಯಾನದಲ್ಲಿ ಪ್ರಮುಖ ಭಯೋತ್ಪಾದಕ ಬೆದರಿಕೆಯೊಂದನ್ನು ನಿಗ್ರಹಿಸಲಾಗಿದೆ ಎಂದು ಸೇನೆಯ ಉನ್ನತ ಅಧಿಕಾರಿಗಳು ಪ್ರತಿಪಾದಿಸಿದ್ದರು.

ಆದರೆ, ಶೋಪಿಯಾನದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸೋದರ ಸಂಬಂಧಿ ಯುವಕರನ್ನು ಸೇನೆ ಎನ್‌ಕೌಂಟರ್ನಲ್ಲಿ ಹತ್ಯೆಗೈದಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ಪ್ರಕರಣದಲ್ಲಿ ಸಾಕ್ಷದ ಸಾರಾಂಶವನ್ನು ದಾಖಲಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸೇನೆ ಹೇಳಿದ ಎರಡು ದಿನಗಳ ಬಳಿಕ ಪೊಲೀಸಲು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಕಾರ್ಯಾಚರಣೆ ಸಂದರ್ಭ ಭಾರತೀಯ ಸೇನೆ ನೈತಿಕ ನಡತೆಗೆ ಬದ್ಧವಾಗಿರಬೇಕು ಎಂದು ಸೇನೆಯ ವಕ್ತಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News