×
Ad

ಚಳಿಯನ್ನೂ ಲೆಕ್ಕಿಸದೆ ದಿಲ್ಲಿ ಗಡಿಭಾಗದಲ್ಲೇ ಇರಲು ರೈತರ ನಿರ್ಧಾರ

Update: 2020-12-27 22:33 IST

ಹೊಸದಿಲ್ಲಿ, ಡಿ.27: ಕೃಷಿ ಕಾಯ್ದೆಯನ್ನು ವಿರೋಧಿಸಿ ದಿಲ್ಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರು, ಕೊರೆಯುವ ಚಳಿಯನ್ನೂ ಲೆಕ್ಕಿಸದೆ ತಮ್ಮ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ.ದಿಲ್ಲಿಯ ಸಿಂಘು ಗಡಿಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೇಂದ್ರ ಸರಕಾರ ಹಾಗೂ ಪ್ರತಿಭಟನಾ ನಿರತ ರೈತರ ಮಧ್ಯೆ ಡಿಸೆಂಬರ್ 29ರಂದು ಮತ್ತೊಂದು ಸುತ್ತಿನ ಮಾತುಕತೆ ನಿಗದಿಯಾಗಿದೆ. ಈ ಮಧ್ಯೆ, ಡಿಸೆಂಬರ್ 30ರಂದು ಕುಂಡ್ಲಿ-ಮನೇಸರ್-ಪಾಲ್ವಲ್ ಹೆದ್ದಾರಿಯಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸಲು ರೈತರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಾಹನ ಮತ್ತು ಜನ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆಯಿದ್ದು ವಾಹನ ಸವಾರರು ಪರ್ಯಾಯ ರಸ್ತೆ ಬಳಸುವಂತೆ ದಿಲ್ಲಿ ಟ್ರಾಫಿಕ್ ಪೊಲೀಸರು ಟ್ವೀಟ್ ಮೂಲಕ ವಿನಂತಿಸಿದ್ದಾರೆ. ಸಿಂಘು, ಘಾಜಿಪುರ ಮತ್ತು ಟಿರ್ಕಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದಿಲ್ಲಿಯನ್ನು ನೋಯ್ಡ ಮತ್ತು ಗಾಝಿಯಾಬಾದ್‌ನೊಂದಿಗೆ ಸಂಪರ್ಕಿಸುವ ಗಡಿಭಾಗದಲ್ಲಿ ರಸ್ತೆ ಸಂಚಾರ ಮೊಟಕುಗೊಂಡಿರುವುದರಿಂದ ವಾಹನ ಸವಾರರು ಆನಂದ್ ವಿಹಾರ, ಡಿಎನ್‌ಡಿ, ಅಪ್ಸರಾ, ಭೋಪ್ರ ಮತ್ತು ಲಯನ್ ಗಡಿಭಾಗದಿಂದ ದಿಲ್ಲಿಗೆ ಆಗಮಿಸುವ ಪರ್ಯಾಯ ರಸ್ತೆಯನ್ನು ಬಳಸುವಂತೆ ಪೊಲೀಸರು ವಿನಂತಿಸಿದ್ದಾರೆ. ಮುಕರ್ಬ ಮತ್ತು ಜಿಟಿಕೆ ರಸ್ತೆಯ ಮೂಲಕ ಆಗಮಿಸುವ ವಾಹನಗಳು ಪರ್ಯಾಯ ರಸ್ತೆ ಬಳಸಬೇಕು. ಹೊರವರ್ತುಲ ರಸ್ತೆಯಲ್ಲಿ ಸಂಚರಿಸಬೇಡಿ ಎಂದು ಪೊಲೀಸರು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News