ಉತ್ತರಭಾರತದಲ್ಲಿ ತೀವ್ರ ಚಳಿಗಾಳಿ: ಮದ್ಯಪಾನ ಬೇಡ, ಜನತೆಗೆ ಇಲಾಖೆಯ ಸಲಹೆ

Update: 2020-12-27 17:40 GMT

ಹೊಸದಿಲ್ಲಿ, ಡಿ. 27: ಡಿಸೆಂಬರ್ 28ರಿಂದ ಉತ್ತರಭಾರತದ ಹಲವೆಡೆ ತೀವ್ರ ಚಳಿಗಾಳಿ ಬೀಸುವ ನಿರೀಕ್ಷೆಯಿದ್ದು ಜನತೆ ಮದ್ಯಪಾನದಿಂದ ದೂರ ಉಳಿದು ಆರೋಗ್ಯದ ಬಗ್ಗೆ ಗಮನ ನೀಡುವಂತೆ ಹವಾಮಾನ ಇಲಾಖೆ ದಿಲ್ಲಿ ಹಾಗೂ ಇತರ ಐದು ರಾಜ್ಯಗಳ ಜನತೆಗೆ ಸಲಹೆ ನೀಡಿದೆ.

ಡಿಸೆಂಬರ್ 25ರಿಂದ ದಿಲ್ಲಿ, ಪಂಜಾಬ್, ಹರ್ಯಾನ, ಚಂಡೀಗಢ, ಉತ್ತರಪ್ರದೇಶ ಮತ್ತು ಉತ್ತರ ರಾಜಸ್ತಾನದಲ್ಲಿ ಬೀಸುತ್ತಿರುವ ಚಳಿಗಾಳಿ ಡಿಸೆಂಬರ್ 28ರ ಬಳಿಕ ತೀವ್ರ ಚಳಿಗಾಳಿಯಾಗಿ ಬದಲಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಫ್ಲೂ, ಶೀತ, ನೆಗಡಿಯಂತಹ ವಿವಿಧ ಅನಾರೋಗ್ಯಗಳು ಜನರನ್ನು ಬಾಧಿಸಬಹುದು. ಮದ್ಯಪಾನ ಮಾಡಿದರೆ ಅದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಮದ್ಯಪಾನ ಮಾಡಬೇಡಿ. ವಿಟಮಿನ್ 'ಸಿ' ಯಥೇಚ್ಚವಾಗಿರುವ ಹಣ್ಣುಗಳನ್ನು ತಿನ್ನುವ ಜೊತೆಗೆ , ಚರ್ಮದ ಆರ್ದ್ರತೆಯನ್ನು ನಿರಂತರ ಉಳಿಸಿಕೊಳ್ಳಬೇಕು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ.

ಹೊರಾಂಗಣ ಚಟುವಟಿಕೆಯನ್ನು ಕಡಿಮೆಗೊಳಿಸಿ, ಮನೆಯೊಳಗೆ ಹೀಟರ್ ಬಳಸುವುದಾದರೆ ಸೂಕ್ತ ಗಾಳಿ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಿ, ವಿದ್ಯುತ್‌ಶಕ್ತಿಯ ಅಥವಾ ಗ್ಯಾಸ್‌ನ ಹೀಟಿಂಗ್ ಸಾಧನಗಳನ್ನು ಬಳಸುವಾಗ ಗರಿಷ್ಟ ಎಚ್ಚರ ವಹಿಸಬೇಕು ಎಂದು ಇಲಾಖೆ ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News