×
Ad

ನೃತ್ಯ ವಿಮರ್ಶಕ ಸುನಿಲ್ ಕೊಠಾರಿ ನಿಧನ

Update: 2020-12-27 23:14 IST

ಹೊಸದಿಲ್ಲಿ, ಡಿ.27: ಕಳೆದ ತಿಂಗಳು ಕೊರೋನ ಸೋಂಕು ದೃಢಪಟ್ಟ ಬಳಿಕ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದ ಖ್ಯಾತ ನೃತ್ಯ ವಿಮರ್ಶಕ, ಇತಿಹಾಸಜ್ಞ ಮತ್ತು ವಿದ್ವಾಂಸ ಸುನಿಲ್ ಕೊಠಾರಿ ರವಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕೊರೋನ ಸೋಂಕಿಗೆ ಒಳಗಾಗಿದ್ದ ಸುನಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ದಿಲ್ಲಿಯ ಏಶ್ಯನ್ ಗೇಮ್ಸ್ ಗ್ರಾಮದ ಬಳಿಯಿರುವ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರು. ಆದರೆ ರವಿವಾರ ಬೆಳಿಗ್ಗೆ ಹೃದಯಾಘಾತಕ್ಕೆ ಒಳಗಾಗಿದ್ದು ಆಸ್ಪತ್ರೆಗೆ ದಾಖಲಿಸುವಾಗಲೇ ಮೃತಪಟ್ಟಿದ್ದಾರೆ. ಅವರಿಗೆ 87 ವರ್ಷವಾಗಿತ್ತು ಎಂದು ಅವರ ಕುಟುಂಬದ ಸ್ನೇಹಿತೆ, ಕಥಕ್ ನೃತ್ಯಗಾರ್ತಿ ವಿಧಾ ಲಾಲ್ ಹೇಳಿದ್ದಾರೆ.

ಭರತನಾಟ್ಯಂ, ಒಡಿಸ್ಸಿ, ಕಥಕ್, ಕೂಚುಪುಡಿ ಸೇರಿದಂತೆ ಭಾರತೀಯ ನೃತ್ಯ ಪ್ರಾಕಾರಗಳ ಕುರಿತು 29ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಖ್ಯಾತ ನೃತ್ಯಗಾರರಾದ ಉದಯ್‌ಶಂಕರ್ ಮತ್ತು ರುಕ್ಮಿಣಿ ದೇವಿ ಅರುಂಡೇಲ್ ಕುರಿತ ಜೀವನಚರಿತ್ರೆಯನ್ನೂ ಪ್ರಕಟಿಸಿದ್ದಾರೆ. ಕೋಲ್ಕತಾದ ರವೀಂದ್ರ ಭಾರತಿ ವಿವಿಯ ಉದಯ್‌ಶಂಕರ್ ಪೀಠದಲ್ಲಿ ಪ್ರೊಫೆಸರ್ ಆಗಿ, ನ್ಯೂಯಾರ್ಕ್ ವಿವಿಯ ನೃತ್ಯ ವಿಭಾಗದಲ್ಲಿ ಫುಲ್‌ಬ್ರೈಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು. ಭಾರತೀಯ ನೃತ್ಯದ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದ ಸುನಿಲ್ ಕೊಠಾರಿ 2001ರಲ್ಲಿ ಪದ್ಮಶ್ರೀ ಪ್ರಶಸ್ತಿ, 1995ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2000 ಮತ್ತು 2011ರಲ್ಲಿ ಗುಜರಾತ್ ಸಂಗೀತ ನಾಟಕ ಅಕಾಡೆಮಿಯ ಗೌರವ ಪುರಸ್ಕಾರ, ನ್ಯೂಯಾರ್ಕ್‌ನ ನೃತ್ಯ ವಿಮರ್ಶಕರ ಸಂಘದ ಜೀವಮಾನ ಸಾಧನೆಯ ಪ್ರಶಸ್ತಿಯ ಸಹಿತ ಹಲವು ಗೌರವಕ್ಕೆ ಪಾತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News