×
Ad

ಕೊರೋನ ಹಾವಳಿ ನಡುವೆ ‘ಆತ್ಮ ನಿರ್ಭರತೆ’ಗೆ ಸಾಕ್ಷಿಯಾದ ಭಾರತ: ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ

Update: 2020-12-27 23:34 IST

ಹೊಸದಿಲ್ಲಿ, ಡಿ. 27: ಕೊರೋನ ಹಾವಳಿ ಹಲವಾರು ಸವಾಲುಗಳನ್ನು ಒಡ್ಡಿದೆ ಹಾಗೂ ಜೀವನವನ್ನು ಸಂಕಷ್ಟಕ್ಕೀಡು ಮಾಡಿದೆ. ಆದರೆ, ಅದು ಭಾರತೀಯರಿಗೆ ಅತಿ ಮುಖ್ಯವಾದ ‘ಆತ್ಮ ನಿರ್ಭರತೆ’ಯ ಪಾಠವನ್ನೂ ಕಲಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದರು.

ಸಾಂಕ್ರಾಮಿಕ ರೋಗದ ಈ ವರ್ಷದಲ್ಲಿ ಜನರು ಪ್ರಜ್ಞಾಪೂರ್ವಕವಾಗಿ ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ವರ್ಗಾವಣೆಗೊಂಡಿದ್ದಾರೆ ಎಂದು ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ನ 2020ರ ಕೊನೆಯ ಸಂಚಿಕೆಯಲ್ಲಿ ಅವರು ಹೇಳಿದರು.

ಇದು ಚಿಂತನಾ ಪ್ರಕ್ರಿಯೆಯಲ್ಲಿ ಅತಿ ದೊಡ್ಡ ಬದಲಾವಣೆ. ಇದು ಪ್ರಮುಖ ರೂಪಾಂತರಕ್ಕೆ ಜೀವಂತ ಉದಾಹರಣೆ ಎಂದು ಅವರು ನುಡಿದರು.

 ‘‘ಹಲವು ಸವಾಲುಗಳು ಇದ್ದುವು. ಆದರೆ, ನಾವು ಇದರಿಂದ ಹೊಸ ಪಾಠ ಕಲಿತೆವು’’ ಎಂದು ಹೇಳಿದ ಪ್ರಧಾನಿ, 2020ರಲ್ಲಿ ಭಾರತ ‘ಆತ್ಮನಿರ್ಭರತೆ’ಗೆ ಸಾಕ್ಷಿಯಾಗಿರುವುದನ್ನು ನಾವು ನೋಡಿದೆವು ಎಂದರು.

ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವ ‘ವೋಕಲ್ ಫಾರ್ ಲೋಕಲ್’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಉತ್ಪಾದಕರು ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸುವ ಬಗ್ಗೆ ಚಿಂತಿಸುತ್ತಿದ್ದಾರೆ. ಇದು ‘ಆತ್ಮ ನಿರ್ಭರ ಭಾರತ’ದತ್ತ ಸಾಗುವ ಪ್ರಯತ್ನಕ್ಕೆ ಉತ್ತೇಜನ ನೀಡಲಿದೆ ಎಂದು ಅವರು ಹೇಳಿದರು.

ವಿದೇಶಿ ಉತ್ಪನ್ನಗಳಿಗೆ ಭಾರತೀಯ ಪರ್ಯಾಯವನ್ನು ಗುರುತಿಸುವಂತೆ ಪ್ರಧಾನಿ ಅವರು ಪ್ರಜೆಗಳನ್ನು ಆಗ್ರಹಿಸಿದರು. ‘‘ದಿನಂಪ್ರತಿ ಬಳಸುವ ವಸ್ತುಗಳ ಪಟ್ಟಿ ಮಾಡಿ ಹಾಗೂ ಯಾವ ವಸ್ತು ಅಪ್ರಜ್ಞಾಪೂರ್ವಕವಾಗಿ ನಮ್ಮ ಬದುಕಿನ ಭಾಗವಾಗಿದೆ ಹಾಗೂ ಅದು ನಮ್ಮನ್ನು ಅವರ ಸೆರೆಯಾಳನ್ನಾಗಿ ಮಾಡಿದೆ ಎಂಬುದನ್ನು ವಿಶ್ಲೇಷಿಸಿ’’ ಎಂದು ಅವರು ಹೇಳಿದರು.

ಅವರ ಉತ್ಪನ್ನಗಳಿಗೆ ಭಾರತೀಯ ಪರ್ಯಾಯವನ್ನು ಕಂಡು ಹಿಡಿಯೋಣ ಹಾಗೂ ಭಾರತೀಯರು ಕಠಿಣ ಶ್ರಮವಹಿಸಿ ಉತ್ಪಾದಿಸಿದ ಉತ್ಪನ್ನಗಳನ್ನು ಬಳಸಲು ನಿರ್ಧರಿಸೋಣ ಎಂದು ಅವರು ತಿಳಿಸಿದರು.

  ಸ್ಥಳೀಯ ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಸರಕಾರ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಜಮ್ಮು ಹಾಗೂ ಕಾಶ್ಮೀರ ಸರಕಾರದ ಉದಾಹರಣೆ ನೀಡಿದ ಅವರು, ಕಾಶ್ಮೀರದಲ್ಲಿ ಬೆಳೆಯುವ ಕೇಸರಿಯನ್ನು ಜನರು ಹೆಚ್ಚು ಬಳಸುವ ಮೂಲಕ ಅದನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯ ಬ್ರಾಂಡ್ ಮಾಡಬೇಕೆಂದು ಕರೆ ನೀಡಿದರು. ಸರಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮಖವಾಗಿದೆ. ಕೇಸರಿಗೆ ಈಗಾಗಲೇ ಭೌಗೋಳಿಕ ಗುರುತಿಸುವಿಕೆ (ಜಿಐ ಟ್ಯಾಗ್) ನೀಡಿದೆ ಎಂದರು.

ಏಕ ಬಳಕೆಯ ಪ್ಲಾಸ್ಟಿಕ್ ದೇಶವನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ. ಈ ಸಮಸ್ಯೆಯನ್ನು ಕೊನೆಗಾಣಿಸಲು ಯೋಜನೆ ರೂಪಿಸಬೇಕಿದೆ ಎಂದು ಅವರು ಹೇಳಿದರು. ಅಲ್ಲದೆ, ವನ್ಯಜೀವಿ ಸಂರಕ್ಷಣೆಗೆ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಅವರು ತಿಳಿಸಿದರು.

---------------------

ಬಾಕ್ಸ್

ಪ್ರಧಾನಿ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ಭಾಷಣದ ಸಂದರ್ಭ ಕಡಲ ತೀರ ಸ್ವಚ್ಛತೆಗೆ ಆದ್ಯತೆ ನೀಡಿದ ಬೈಂದೂರಿನ ಅನುದೀಪ್ ಹಾಗೂ ಮಿನುಷಾ ದಂಪತಿಯನ್ನು ಪ್ರಶಂಶಿಸಿದರು. ಅಲ್ಲದೆ, ಈ ದಂಪತಿಯ ಮಾದರಿಯಾಗಿ ಅನುಸರಿಸುವಂತೆ ಯುವ ಜನತೆಗೆ ಕರೆ ನೀಡಿದರು. ಬೈಂದೂರಿನ ಅನುದೀಪ್ ಹಾಗೂ ಮಿನುಷಾ ಸತಿ-ಪತಿಯಾದ ಬಳಿಕ ಎಲ್ಲರಂತೆ ಮಧುಚಂದ್ರಕ್ಕೆ ಹೋಗಿರಲಿಲ್ಲ. ಬದಲಾಗಿ, ಕಡಲ ತೀರ ಸ್ವಚ್ಚಗೊಳಿಸಲು ನಿರ್ಧರಿಸಿದ್ದರು. ಬೈಂದೂರು ಸಮೀಪದ ಕಲುಷಿತಗೊಂಡಿದ್ದ ಸೋಮೇಶ್ವರದ 700 ಮೀಟರ್ ಕಿನಾರೆಯಲ್ಲಿ 8 ದಿನಗಳ ಕಾಲ ಸ್ವಚ್ಛತಾ ಕಾರ್ಯ ನಿರ್ವಹಿಸಿ ಸಾಮಾಜಿಕ ಕಾಳಜಿ ಮೆರೆದಿದ್ದರು. ಕಡಲ ಕಿನಾರೆಯಲ್ಲಿ ಪ್ರತಿ ದಿನ 2 ಗಂಟೆಗಳ ಕಾಲ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡು ಮದ್ಯದ ಬಾಟಲಿ, ಪ್ಲಾಸ್ಟಿಕ್, ಚಪ್ಪಲಿ, ಕಸಕಡ್ಡಿ ಮೊದಲಾದ ತ್ಯಾಜ್ಯಗಳನ್ನು ತೆಗೆದು ಪರಿಸರ ಪ್ರೇಮ ಮೆರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News