ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರದಿಂದ 2500 ಕೋಟಿ ರೂ.: ಶೋಭಾ ಕರಂದ್ಲಾಜೆ

Update: 2020-12-28 17:18 GMT

ಪಡುಬಿದ್ರೆ , ಡಿ.28: ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಗಾಗಿ ಕೇಂದ್ರ ಸರಕಾರಕ್ಕೆ 2000ರಿಂದ 2500 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಸೋಮವಾರ ಪಡುಬಿದ್ರಿಯ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದ ಪಡುಬಿದ್ರಿ ಎಂಡ್‌ಪಾಯಿಂಟ್ ಕಡಲ ತೀರದಲ್ಲಿ ‘ನೀಲಿಧ್ವಜ’ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತಿದ್ದರು. ಈ ಬೀಚ್‌ನ್ನು ಕೇಂದ್ರ ಸರಕಾರದ ಎಂಟು ಕೋಟಿ ರೂ. ಹಾಗೂ ರಾಜ್ಯ ಸರಕಾರದ 2.68 ಕೋಟಿ ರೂ. ಅನುದಾನ ಸೇರಿದಂತೆ ಒಟ್ಟು 10.28 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದರು.

ಪಡುಬಿದ್ರಿಯಿಂದ ಎಂಡ್‌ ಪಾಯಿಂಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ವಿಸ್ತರಣೆ, ಪಾರ್ಕಿಂಗ್ ವ್ಯವಸ್ಥೆ, ಸಮೀಪದ ದ್ವೀಪ ಅಭಿವೃದ್ಧಿಗಾಗಿ ಒಟ್ಟು 6 ಕೋಟಿ ರೂ. ಗಳ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಕೇಂದ್ರದ ಸರ್ಕ್ಯೂಟ್ ಟೂರಿಸಂ ಅಭಿವೃದ್ಧಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ‘ಸಾಗರಮಾಲಾ’ ಯೋಜನೆಯಡಿ 1000 ಕೋಟಿ ರೂ. ಗಳನ್ನು ನೀಡಲಿರುವುದಾಗಿ ಹೇಳಿದ ಶೋಭಾ ಕರಂದ್ಲಾಜೆ, ಇವುಗಳನ್ನು ತೇಲುವ ಜಟ್ಟಿ ನಿರ್ಮಾಣ, ಹೆಜಮಾಡಿ ಹಾಗೂ ಕೋಡಿ ಮೀನುಗಾರಿಕಾ ಬಂದರುಗಳ ಕಾಮಗಾರಿ, ಜಿಲ್ಲೆಯ ವಿವಿಧ ದ್ವೀಪಸ್ತಂಭದ ಅಭಿವೃದ್ಧಿ ಹಾಗೂ ಅಲ್ಲಿನ ಲೈಟಿಂಗ್ ವ್ಯವಸ್ಥೆಗಾಗಿ, ಪಡುಕೆರೆಯಲ್ಲಿ ಮರೀನಾ ಬೀಚ್ ಅಭಿವೃದ್ಧಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಅಲ್ಲದೇ ಅಳುಪರ ಬಾರಕೂರಿನಲ್ಲಿ ಹೆರೀಟೇಜ್ ಸೆಂಟರ್, ಇಂಟ್ರಪ್ರಟೇಶನ್ ಸೆಂಟರ್, ಕಲ್ಯಾಣಪುರ ಬಳಿ ಫೆರ್ರಿ ಸೆಂಟರ್, ಸೀಫ್ ಪಾರ್ಕ್, ಕುಂದಾಪುರ ಕೋಡಿ ಬೀಚ್‌ನಲ್ಲಿ ಇಕೋ ಸೆಂಟರ್, ಕಾರ್ಕಳ ಮತ್ತು ಮೂಡುಬಿದ್ರಿಗಳಲ್ಲಿ ಜೈನ್ ಸ್ಪಿರಿಚ್ಯುವಲ್ ಸರ್ಕ್ಯೂಟ್ ಟೂರಿಸಂ ಅಭಿವೃದ್ಧಿ ಮತ್ತಿತರ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಕಾಪು ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಈ ಬೀಚ್‌ನಲ್ಲಿ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡುವ ಬಗ್ಗೆ ಯೋಜನೆ ಯನ್ನು ರೂಪಿಸಲಾಗಿದೆ. ಪರಿಸರ ಸ್ನೇಹಿಯಾಗಿ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಬೀಚ್‌ಗಳು ಇನ್ನಷ್ಟು ಅಭಿವೃದ್ಧಿ ಅಭಿವೃದ್ಧಿಯಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಮಂಗಳೂರಿನ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರಬಾಬು, ಕರಾವಳಿ ಪ್ರವಾ ಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಉಡುಪಿ ಜಿಪಂ ಕಾರ್ಯನಿರ್ವಹಣಾಧಿಕಾರಿ ಡಾ.ವೈ. ನವೀನ್ ಭಟ್, ಉಡುಪಿ ಜಿಲ್ಲಾ ಎಸ್‌ಪಿ ಎನ್. ವಿಷ್ಣುವರ್ಧನ್, ಕಾಪು ತಹಶೀಲ್ದಾರ್ ರಶ್ಮಿ ಕಿಶೋರ್, ಕೆಆರ್‌ಐಡಿಎಲ್‌ನ ಕಾರ್ಯಕಾರಿ ಅಭಿಯಂತರ ಕೃಷ್ಣ ಹೆಬ್ಸೂರ್, ಉಪ ಕೃಷಿ ನಿರ್ದೇಶಕ ಚಂದ್ರಶೇಖರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್ ಬಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿಜಯೇಂದ್ರ ಕಾರ್ಯಕ್ರಮ ನಿರ್ವಹಿಸಿದರು. ಬ್ಲೂ ಫ್ಲ್ಯಾಗ್ ಬೀಚ್ ಪ್ರಬಂಧಕ ವಿಜಯ್ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News