ಬ್ಲ್ಯೂ ಫ್ಲಾಗ್ ಬೀಚ್‌ನಲ್ಲಿ ಉದ್ಘಾಟನಾ ಸಮಾರಂಭ; ಸ್ಥಳೀಯರ ಅವಗಣನೆ: ಆಕ್ರೋಶಿತರಿಂದ ಅಧಿಕಾರಿಗಳಿಗೆ ತರಾಟೆ

Update: 2020-12-28 16:06 GMT

ಪಡುಬಿದ್ರಿ, ಡಿ.28: ಪಡುಬಿದ್ರಿ ಎಂಡ್‌ಪಾಯಿಂಟ್‌ನ ಬ್ಲ್ಯೂ ಫ್ಲಾಗ್ ಬೀಚ್‌ನಲ್ಲಿ ಇಂದು ನಡೆದ ಯೋಜನೆಯ ಉದ್ಘಾಟನಾ ಸಮಾರಂಭ ಹಾಗೂ ಬ್ಲ್ಯೂ ಫ್ಲಾಗ್‌ನ ಅನಾವರಣ ಸಮಾರಂಭದಲ್ಲಿ ಸ್ಥಳೀಯರು ಹಾಗೂ ಊರವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ನೆರೆದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು. ಸಮಾರಂಭ ಮುಗಿಯುತಿದ್ದಂತೆ ಅವರು ಜಿಲ್ಲಾಧಿಕಾರಿ ಹಾಗೂ ಸ್ಥಳದಲ್ಲಿದ್ದ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ವಾಯಿತು. ಯೋಜನೆಯಲ್ಲಿ ದುಡಿದ ಪ್ರಮುಖ ವ್ಯಕ್ತಿಗಳಿಗೆ ಸ್ಮರಣಿಕೆಯನ್ನು ನೀಡಲು ಸಾಗರ್ ವಿದ್ಯಾಮಂದಿರದ ಸಂಚಾಲಕ ಸುಕುಮಾರ್ ಶ್ರೀಯಾನ್ ಅವರನ್ನು ವೇದಿಕೆಗೆ ಅಧಿಕಾರಿಗಳು ಬರುವಂತೆ ಮನವಿ ಮಾಡಿದರು.

ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ವಾಯಿತು. ಯೋಜನೆಯಲ್ಲಿ ದುಡಿದ ಪ್ರಮುಖ ವ್ಯಕ್ತಿಗಳಿಗೆ ಸ್ಮರಣಿಕೆಯನ್ನು ನೀಡಲು ಸಾಗರ್ ವಿದ್ಯಾಮಂದಿರದ ಸಂಚಾಲಕ ಸುಕುಮಾರ್ ಶ್ರೀಯಾನ್ ಅವರನ್ನು ವೇದಿಕೆಗೆ ಅಧಿಕಾರಿಗಳು ಬರುವಂತೆ ಮನವಿ ಮಾಡಿದರು. ಈ ವೇಳೆ ಪಡುಬಿದ್ರಿ ಗಾಪಂನ ಮಾಜಿ ಸದಸ್ಯ ಅಶೋಕ್, ಅವರನ್ನು ವೇದಿಕೆಗೆ ಹೋಗದಂತೆ ತಡೆದು ಈ ಕಾರ್ಯಕ್ರಮದಲ್ಲಿ ಸ್ಥಳೀಯರನ್ನು ಕಡೆಗಣಿಸಲಾಗಿದೆ. ಸ್ಥಳೀಯರು ಈ ಬೀಚ್‌ಗಾಗಿ ಎಷ್ಟೊಂದು ತ್ಯಾಗ ಮಾಡಿದ್ದಾರೆ. ಆದರೆ ಇದನ್ನು ಅಧಿಕಾರಿಗಳು ಮರೆತಿದ್ದಾರೆ ಎಂದವರು ಅಧಿಕಾರಿಗಳನ್ನು ಜೋರಾಗಿ ತರಾಟೆಗೆ ತೆಗೆದುಕೊಂಡರು.

 ಮೊದಲು ಈ ಯೋಜನೆಗೆ ಪಡುಬಿದ್ರಿಯ ಜನ ವಿರೋಧವಿದ್ದರು. ನಾವು ಕೆಲವರು ಸೇರಿ ಜನರನ್ನು ಸಮಾಧಾನಪಡಿಸಿ, ಯೋಜನೆ ಅನುಷ್ಠಾನದಿಂದ ಆಗುವ ಲಾಭವನ್ನು ಮನವರಿಕೆ ಮಾಡಿ ಅವರ ಮನ ಒಲಿಸಿದ್ದೆವು. ಆದರೆ ಈಗ ನಮ್ಮವರನ್ನೆಲ್ಲಾ ಅಧಿಕಾರಿಗಳು ಮರೆತು ಯಾರ್ಯಾರನ್ನೋ ಕರೆದು ಗೌರವಿಸು ತಿದ್ದಾರೆ. ನಮ್ಮ ಅಷ್ಟೊಂದು ಪ್ರಯತ್ನಕ್ಕೆ ಒಂದು ಶಬ್ದದ ಕೃತಜ್ಞತೆಯನ್ನೂ ಹೇಳಿಲ್ಲ ಎಂದವರು ಹೇಳಿದರು.

ಅಲ್ಲದೆ ಇಲ್ಲಿಗೆ ಬೇಕಾದ ಮೂಲಸೌಕರ್ಯಗಳನ್ನು ಮಾಡದೆ ಸ್ಥಳೀಯರನ್ನು ಕಡೆಗಣಿಸಿ ಬೀಚ್ ಉದ್ಘಾಟಿಸಿರುವ ಕ್ರಮವನ್ನು ಅವರು ಪ್ರಶ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಶಾಸಕ ಲಾಲಾಜಿ ಮೆಂಡನ್, ಜಿಲ್ಲಾಧಿಕಾರಿ ಜಿ. ಜಗದೀಶ್ ತಬ್ಬಿಬ್ಬಾದರು. ಯಾವುದೇ ಕಾರಣಕ್ಕೂ ಸ್ಥಳೀಯರನ್ನು ಕಡೆಗಣಿಸಿಲ್ಲ. ಅಲ್ಲದೆ ಇಲ್ಲಿನ ಸಮಸ್ಯೆಗಳತ್ತ ಗಮನಹರಿಸಲಾಗುವುದು ಎಂದು ಹೇಳುವ ಮೂಲಕ ಮಾಧಾನ ಪಡಿಸಲು ಪ್ರಯತ್ನಿಸಿದರು.
ಇದೀಗ ಈ ಪರಿಸರದಲ್ಲಿರುವ ನಮಗೆ ಮನೆಗೆ ಬರಲು ಸಹ ಸಾಧ್ಯವಾಗುತ್ತಿಲ್ಲ. ಇಡೀ ಪರಿಸರ ಗಬ್ಬೆದ್ದುಹೋಗಿದೆ. ನಮ್ಮ ಶಾಲಾ ಪರಿಸರವೂ ಹಾಳಾಗಿದೆ. ರಸ್ತೆಯನ್ನು ಸರಿಪಡಿಸಿಲ್ಲ. ಪಾರ್ಕಿಂಗ್‌ಗೆ ವ್ಯವಸ್ಥೆ ಇಲ್ಲ. ಬೀಚ್‌ಗಳನ್ನು ಇಲ್ಲಿಗೆ ಬಂದವರು ಗಲೀಜು ಮಾಡುತಿದ್ದಾರೆ. ನಾನು ಶಾಲಾ ಮಕ್ಕಳ ಮೂಲಕ ಅದನ್ನು ಸ್ವಚ್ಚಗೊಳಿಸುತಿದ್ದೇನೆ ಎಂದು ಸುಕುಮಾರ್ ವಿವರಿಸಿದರು.

ಶೀಘ್ರವೇ ಊರವರನ್ನು ಸೇರಿಸಿಕೊಂಡು ಸಭೆ ನಡೆಸಿ ಎಲ್ಲವನ್ನೂ ಚರ್ಚಿಸೋಣ ಎಂದು ಲಾಲಾಜಿ ಹಾಗೂ ಜಿಲ್ಲಾಧಿಕಾರಿ ತಿಳಿಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News