ಖಾಸಗೀಕರಣಗೊಳಿಸಿದರೆ ಭವಿಷ್ಯ ನಿಧಿ, ವೈದ್ಯಕೀಯ ಯೋಜನೆ ಸೌಲಭ್ಯ ವಿಸ್ತರಿಸಿ

Update: 2020-12-29 15:09 GMT

ಹೊಸದಿಲ್ಲಿ, ಡಿ. 29: ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಹೂಡಿಕೆ ಹಿಂದೆಗೆದ ಅಥವಾ ಖಾಸಗೀಕರಣದ ಬಳಿಕವೂ ವೈದ್ಯಕೀಯ ಯೋಜನೆ, ರಜೆ ನಗದೀಕರಣ ಹಾಗೂ ಭವಿಷ್ಯ ನಿಧಿ ಸೌಲಭ್ಯಗಳನ್ನು ಮುಂದುವರಿಸುವಂತೆ ಆಗ್ರಹಿಸಿ ಏರ್ ಇಂಡಿಯಾ ಉದ್ಯೋಗಿಗಳ ಒಕ್ಕೂಟ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದೆ.

ಡಿಸೆಂಬರ್ 26ರ ದಿನಾಂಕದ ಪತ್ರದಲ್ಲಿ ಒಕ್ಕೂಟ, ಅಸ್ತಿತ್ವದಲ್ಲಿರುವ ವೈದ್ಯಕೀಯ ಯೋಜನೆ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತ ಉದ್ಯೋಗಿಗಳಿಗೆ ಪ್ರಯೋಜನಕರವಾಗಿತ್ತು. ಅಲ್ಲದೆ, ನಿವೃತ್ತಿಯ ಸಂದರ್ಭ ರಜೆ ನಗದೀಕರಿಸುವ ಸೌಲಭ್ಯ ದೊರಕುತ್ತಿತ್ತು ಎಂದು ಹೇಳಿದೆ.

ಹಲವು ಉದ್ಯೋಗಿಳು ತಮ್ಮ ನಿವೃತ್ತ ಜೀವನವನ್ನು ಶಿಸ್ತಿನಿಂದ ನಿರ್ವಹಿಸಲು ಈ ಸೌಲಭ್ಯ ಅವಲಂಭಿಸಿದ್ದರು. ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸಿದರೆ, ಈ ಸೌಲಭ್ಯವನ್ನು ನಿಲ್ಲಿಸುವ ಭೀತಿ ನಮಗಿದೆ. ಇದರಿಂದ ಉದ್ಯೋಗಿಗಳು ಅತಿ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಆದುದರಿಂದ 2021 ಮಾರ್ಚ್ 31ರ ವರೆಗೆ ಉದ್ಯೋಗಿಗಳಿಗೆ ರಜೆ ನಗದೀಕರಣ ಭತ್ಯೆ ಪಾವತಿಸಬೇಕು ಎಂಬ ಪ್ರಸ್ತಾವವನ್ನು ಎಐಇಯು ಮುಂದಿರಿಸಲು ಬಯಸುತ್ತದೆ ಎಂದು ಪತ್ರ ಹೇಳಿದೆ.

ಈ ಹಿಂದಿನ ಏರ್ ಇಂಡಿಯಾ ಹಾಗೂ ಇಂಡಿಯನ್ ಏರ್‌ಲೈನ್ಸ್‌ನಲ್ಲಿ 1925ರ ಭವಿಷ್ಯ ನಿಧಿ ಟ್ರಸ್ಟ್ ಕಾಯ್ದೆ ಪ್ರಕಾರ ಎರಡು ಪ್ರತ್ಯೇಕ ಭವಿಷ್ಯ ನಿಧಿ ಟ್ರಸ್ಟ್ ಇತ್ತು. ಒಂದು ವೇಳೆ ಏರ್ ಇಂಡಿಯಾ ಸಂಸ್ಥೆ ಖಾಸಗೀಕರಣ ಅಥವಾ ಹೂಡಿಕೆ ಹಿಂದೆಗತಕ್ಕೆ ಒಳಗಾದರೆ, ಈ ಟ್ರಸ್ಟ್ ಅನ್ನು ಮುಂದುವರಿಸಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಪತ್ರ ಹೇಳಿದೆ. ಏರ್ ಇಂಡಿಯಾದಲ್ಲಿ ವ್ಯೂಹಾತ್ಮಕ ಹೂಡಿಕೆಗೆ ಅನೇಕ ಮಂದಿ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ಸರಕಾರ ಡಿಸೆಂಬರ್ 14ರಂದು ಹೇಳಿತ್ತು.

2019 ನವೆಂಬರ್ 1ರ ವರೆಗೆ ಏರ್ ಇಂಡಿಯಾದಲ್ಲಿ ಒಟ್ಟು 14,032 ಉದ್ಯೋಗಿಗಳು ಇದ್ದಾರೆ. ಇದರಲ್ಲಿ 9,426 ಖಾಯಂ ಉದ್ಯೋಗಿಗಳು. ಉಳಿದವರು ಗುತ್ತಿಗೆ ಉದ್ಯೋಗಿಗಳು ಎಂದು ಈ ವರ್ಷ ಜನವರಿ 20ರಲ್ಲಿ ಬಿಡುಗಡೆಗೊಳಿಸಲಾದ ಪ್ರಾಥಮಿಕ ಮಾಹಿತಿ ಜ್ಞಾಪನಾಪತ್ರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News