ಕೃಷಿ ಕಾಯ್ದೆ ರದ್ದತಿಯ ಬಗ್ಗೆ ಮಾತ್ರ ಮಾತುಕತೆ: ಕೇಂದ್ರಕ್ಕೆ ರೈತ ಸಂಘದ ಪತ್ರ
ಹೊಸದಿಲ್ಲಿ, ಡಿ.29: ಬುಧವಾರ ಕೇಂದ್ರ ಸರಕಾರದೊಂದಿಗೆ ನಿಗದಿಯಾಗಿರುವ ಮಾತುಕತೆಯ ಬಗ್ಗೆ ಪ್ರತಿಭಟನಾನಿರತ ರೈತರು ಕೇಂದ್ರಕ್ಕೆ ಪತ್ರ ಬರೆದಿದ್ದು, ಮೂರು ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ವಿಧಾನದ ಬಗ್ಗೆ ಮಾತ್ರ ಚರ್ಚೆ ನಡೆಯಬೇಕು ಎಂದು ಹೇಳಿದ್ದಾರೆ.
ಬುಧವಾರ ಆರನೇ ಸುತ್ತಿನ ಮಾತುಕತೆಗೆ ಪ್ರತಿಭಟನಾ ನಿರತ ರೈತರನ್ನು ಕೇಂದ್ರ ಸರಕಾರ ಆಹ್ವಾನಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಯುಕ್ತ ಕಿಸಾನ್ ಮೋರ್ಛ(40 ರೈತ ಸಂಘಟನೆಗಳ ಒಕ್ಕೂಟ), ಮೂರು ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಬಗ್ಗೆ ಚರ್ಚೆ ಕೇಂದ್ರೀಕೃತವಾಗಿರಬೇಕು ಮತ್ತು ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಸರಕಾರ ಖಾತರಿ ನೀಡಬೇಕು ಎಂದು ಹೇಳಿದೆ.
ಅಲ್ಲದೆ, ರಾಷ್ಟ್ರೀಯ ರಾಜಧಾನಿ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶದ ವಾಯುಗುಣಮಟ್ಟ ನಿರ್ವಹಣೆ ಆಧ್ಯಾದೇಶ 2020ರ (ದಂಡ ವಿಧಿಸುವಿಕೆ) ವ್ಯಾಪ್ತಿಯಿಂದ ರೈತರನ್ನು ಹೊರಗಿಡುವ ನಿಟ್ಟಿನಲ್ಲಿ ಆಧ್ಯಾದೇಶಕ್ಕೆ ತಿದ್ದುಪಡಿ ಮಾಡುವ ವಿಷಯವೂ ಚರ್ಚೆಯಾಗಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚ ಆಗ್ರಹಿಸಿದೆ.