×
Ad

ಮದುವೆ ನೋಂದಣಿಗೆ ಬಂದಿದ್ದ ಅಂತರ್‌ಧರ್ಮೀಯ ಜೋಡಿಗೆ ಸಂಘಪರಿವಾರದ ಗುಂಪುಗಳಿಂದ ಕಿರುಕುಳ: ಆರೋಪ

Update: 2020-12-29 22:00 IST
ಸಾಂದರ್ಭಿಕ ಚಿತ್ರ

ಭೋಪಾಲ,ಡಿ.29: ತಮ್ಮ ಮದುವೆಯ ನೋಂದಣಿಗಾಗಿ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದ ಅಂತರ್‌ಧರ್ಮೀಯ ಜೋಡಿಗೆ ಎರಡು ಸಂಘಪರಿವಾರದ ಗುಂಪುಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾದ ಘಟನೆ ಸೋಮವಾರ ಮಧ್ಯಪ್ರದೇಶದ ಜಬಲಪುರದಲ್ಲಿ ನಡೆದಿದೆ.

ಮಾಹಿತಿಯ ಮೇರೆಗೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಕಾದು ನಿಂತಿದ್ದ ಹಿಂದು ಧರ್ಮಸೇನಾದ ಪುರುಷ ಸದಸ್ಯರು ಮತ್ತು ಸನಾತನ ವಾಹಿನಿಯ ಮಹಿಳಾ ಸದಸ್ಯೆಯರು ಜೋಡಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

‘ಆತ ಮುಸ್ಲಿಂ ಎನ್ನುವುದು ನನಗೆ ಗೊತ್ತು. ನಾನು ಆತನನ್ನು ಪ್ರೇಮಿಸುತ್ತಿದ್ದೇನೆ ಮತ್ತು ನನ್ನಿಷ್ಟದಂತೆ ಮದುವೆಯಾಗುತ್ತಿದ್ದೇನೆ. ನನಗೀಗಾಗಲೇ 18 ವರ್ಷಗಳಾಗಿವೆ ’ ಎಂದು ಸುದ್ದಿಗಾರರಿಗೆ ತಿಳಿಸಿದ ಯುವತಿ,ತನ್ನ ಮದುವೆಯ ಬಗ್ಗೆ ಹೆತ್ತವರಿಗೆ ಗೊತ್ತಿಲ್ಲ ಎಂದೂ ಹೇಳಿದಳು.

‘ಯುವಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ. ಆದರೆ ನಾವು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆ ’ಎಂದು ಸಂಘಪರಿವಾರದ ಗುಂಪಿನ ಸದಸ್ಯರು ತಿಳಿಸಿದರು.

ಯುವತಿಯನ್ನು ಹೆತ್ತವರ ಬಳಿ ತೆರಳುವಂತೆ ಸೂಚಿಸಿದ ಪೊಲೀಸರು ಯುವಕನನ್ನು ಬಂಧಿಸಿ ಕೆಲ ಗಂಟೆಗಳ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.

‘ಯುವತಿಯ ತಾಯಿ ವಿಷಯವನ್ನು ಮುಂದುವರಿಸಲು ಬಯಸಿಲ್ಲ,ಹೀಗಾಗಿ ಪೊಲೀಸರು ಈವರೆಗೆ ಪ್ರಕರಣವನ್ನು ದಾಖಲಿಸಿಲ್ಲ. ಕಾನೂನಿಗನುಗುಣವಾಗಿ ನಾವು ಕ್ರಮವನ್ನು ತೆಗೆದುಕೊಳ್ಳುತ್ತೇವೆ ’ ಎಂದು ಎಸ್‌ಪಿ ಸಿದ್ಧಾರ್ಥ ಬಹುಗುಣ ತಿಳಿಸಿದರು.

ಇದು ಬಲವಂತದ ಮತಾಂತರ ಮತ್ತು ‘ಲವ್ ಜಿಹಾದ್’ ಪ್ರಕರಣವಾಗಿದೆ ಎಂದು ಹೇಳಿದ ಹಿಂದು ಧರ್ಮಸೇನಾದ ಮುಖ್ಯಸ್ಥ ಯೋಗೀಶ ಅಗರವಾಲ್,ಹೊಸ ಮತಾಂತರ ನಿಷೇಧ ಕಾನೂನು ಜಾರಿಗೆ ಬಂದ ನಂತರ ಯುವಕನ ವಿರುದ್ಧ ದೂರು ದಾಖಲಿಸುವಂತೆ ಯುವತಿಯ ತಾಯಿಯನ್ನು ಒಪ್ಪಿಸುತ್ತೇವೆ ಎಂದರು. ಯುವತಿ ಮತಾಂತರಗೊಂಡಿದ್ದು,ಜೋಡಿ ಇತ್ತೀಚಿಗೆ ನಿಖಾ ಮಾಡಿಕೊಂಡಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News