×
Ad

ಉಯಿಘರ್ ಮುಸ್ಲಿಮರನ್ನು ಬಲವಂತದಿಂದ ಕೆಲಸ ಮಾಡಿಸುತ್ತಿರುವ ಐಫೋನ್ ಪೂರೈಕೆದಾರ ಸಂಸ್ಥೆ

Update: 2020-12-30 13:59 IST

ಬೀಜಿಂಗ್ :  ಆ್ಯಪಲ್ ಐಫೋನ್ ಪೂರೈಕೆದಾರ ಪ್ರತಿಷ್ಠಿತ ಸಂಸ್ಥೆಯಾಗಿರುವ ಲೆನ್ಸ್ ಟೆಕ್ನಾಲಜಿ ಚೀನಾದ ಕ್ಸಿನ್‍ಜಿಯಾಂಗ್ ಪ್ರದೇಶದ  ಸಾವಿರಾರು ಉಯಿಘರ್ ಮುಸ್ಲಿಮರನ್ನು ಬಲವಂತದಿಂದ ಸಂಸ್ಥೆಯಲ್ಲಿ  ಕೆಲಸ ಮಾಡಿಸುತ್ತಿದೆ  ಎಂದು   ಟೆಕ್ ಟ್ರಾನ್ಸ್ ಪರೆನ್ಸಿ ಪ್ರಾಜೆಕ್ಟ್  ಕಂಡುಕೊಂಡಿರುವ ಕುರಿತು ‘ದಿ ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ಆ್ಯಪಲ್ ಸಂಸ್ಥೆಗೆ ಸಾಮಗ್ರಿ ಪೂರೈಕೆ ಮಾಡುವ ಕನಿಷ್ಠ ಐದು ಕಂಪೆನಿಗಳಲ್ಲಿ ಲೆನ್ಸ್ ಟೆಕ್ನಾಲಜಿ ಕೂಡ ಒಂದಾಗಿದೆ. ಈ ಸಂಸ್ಥೆ ಅಮೆಝಾನ್ ಮತ್ತು ಟೆಸ್ಲಾಗೂ ಉಪಕರಣಗಳನ್ನು ಪೂರೈಸುತ್ತಿದೆ.

ಆದರೆ ಲೆನ್ಸ್ ಸಂಸ್ಥೆ ಉಯಿಘರ್ ಮುಸ್ಲಿಮರನ್ನು ಬಲವಂತವಾಗಿ ದುಡಿಸುತ್ತಿದೆ ಎಂಬ ಆರೋಪಗಳನ್ನು ಆ್ಯಪಲ್ ಸಂಸ್ಥೆ ನಿರಾಕರಿಸಿದೆ. ತನಗೆ ಉಪಕರಣ ಪೂರೈಕೆ ಮಾಡುವ ಇತರ ಯಾವುದೇ ಸಂಸ್ಥೆಗಳೂ ಬಲವಂತದಿಂದ ಉಯಿಘರ್ ಕಾರ್ಮಿಕರನ್ನು ಕೆಲಸಕ್ಕೆ ಬಳಸುತ್ತಿಲ್ಲವೆಂಬುದನ್ನು  ತಾನು ಖಾತರಿ ಪಡಿಸಿದ್ದಾಗಿ ಸಂಸ್ಥೆ ಹೇಳಿದೆ.

ಅತ್ತ ಚೀನಾದ ವಿದೇಶಾಂಗ ಸಚಿವಾಲಯ ಕೂಡ ಈ ಕುರಿತು ಪ್ರತಿಕ್ರಿಯಿಸಿ ಬಲವಂತದ  ಉದ್ಯೋಗ ಚೀನಾದಲ್ಲಿಲ್ಲ ಹಾಗೂ ದುರುದ್ದೇಶದಿಂದ ಕೆಲವರು ಇಂತಹ ಸುದ್ದಿ ಹರಡುತ್ತಿದ್ದಾರೆ ಎಂದು  ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News