ದಿಲ್ಲಿ: ಮದ್ಯಪಾನ ಮಾಡುವ ವಯಸ್ಸನ್ನು 21ಕ್ಕೆ ಇಳಿಸಲು ಸಮಿತಿಯ ಶಿಫಾರಸು

Update: 2020-12-30 18:08 GMT

ಹೊಸದಿಲ್ಲಿ, ಡಿ.30: ರಾಷ್ಟ್ರೀಯ ರಾಜಧಾನಿ ದಿಲ್ಲಿಯಲ್ಲಿ ಮದ್ಯಪಾನ ಮಾಡುವ ಕಾನೂನುಬದ್ಧ ವಯಸ್ಸನ್ನು 25ರಿಂದ 21ಕ್ಕೆ ಇಳಿಸಲು , ಪಾನ ನಿರೋಧ ದಿನವನ್ನು ಕಡಿಮೆಗೊಳಿಸಲು ಮತ್ತು ಕಿರಾಣಿ ಅಂಗಡಿಗಳಲ್ಲಿ ವೈನ್ ಮತ್ತು ಬಿಯರ್ ಮಾರಾಟಕ್ಕೆ ಲೈಸೆನ್ಸ್ ನೀಡಲು ದಿಲ್ಲಿ ಸರಕಾರ ನೇಮಿಸಿದ ಸಮಿತಿ ಶಿಫಾರಸು ಮಾಡಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಸ್ವಾತಂತ್ರ ದಿನಾಚರಣೆ(ಆಗಸ್ಟ್ 15), ಗಣರಾಜ್ಯೋತ್ಸವ (ಜನವರಿ 26) ಮತ್ತು ಗಾಂಧಿ ಜಯಂತಿ(ಅಕ್ಟೋಬರ್ 2) ರಂದು ಪಾನನಿರೋಧ ದಿನ ಎಂದು ನಿಗದಿಗೊಳಿಸಲು, ಸರಕಾರ ನಡೆಸುವ ಮದ್ಯದಂಗಡಿಗಳ ಲೈಸೆನ್ಸನ್ನು ರಾಜ್ಯಾದ್ಯಂತ ಸಮಾನವಾಗಿ ಹಂಚಿಕೆ ಮಾಡಲು ಸಮಿತಿ ಸಲಹೆ ನೀಡಿದೆ. ಅಬಕಾರಿ ಆದಾಯ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳು, ಮದ್ಯದಂಗಡಿಯವರು ತೆರಿಗೆ ತಪ್ಪಿಸುವುದನ್ನು ತಡೆಯುವ ಕ್ರಮಗಳ ಬಗ್ಗೆ ಸಲಹೆ ನೀಡಲು ಸಮಿತಿಯನ್ನು ರಚಿಸಲಾಗಿತ್ತು. ದಿಲ್ಲಿ ರಾಜ್ಯ ನಾಗರಿಕ ಸರಬರಾಜು ನಿಗಮ, ದಿಲ್ಲಿ ಪ್ರವಾಸೋದ್ಯಮ ನಿಗಮ, ದಿಲ್ಲಿ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಹಿತ ಸರಕಾರಿ ಇಲಾಖೆಗಳ ಅಧೀನದಲ್ಲಿ ಕಾರ್ಯನಿರ್ವಹಿಸುವ 864 ಸಾರಾಯಿ ಅಂಗಡಿಗಳು ದಿಲ್ಲಿಯಲ್ಲಿವೆ. ರಾಜ್ಯದ ಎಲ್ಲಾ 272 ನಗರಪಾಲಿಕೆ ವಾರ್ಡ್‌ಗಳಲ್ಲಿ, ಇಂದಿರಾಗಾಂಧಿ ಅಂತರ್ ರಾಷ್ಟ್ರೀಯ ವಿಮಾನನಿಲ್ದಾಣ ಮತ್ತು ಹೊಸದಿಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಈ ಅಂಗಡಿಗಳನ್ನು ಸಮಾನವಾಗಿ ಹಂಚಿಕೆ ಮಾಡುವಂತೆ ಸಮಿತಿ ಶಿಫಾರಸು ಮಾಡಿದೆ. ಈಗ ದಿಲ್ಲಿಯಲ್ಲಿ 125 ಕಿರಾಣಿ ಅಂಗಡಿಗಳು ಎಲ್12 ಮತ್ತು ಎಲ್12-ಎಫ್ ಅಬಕಾರಿ ಲೈಸೆನ್ಸ್‌ನಡಿ ಬಿಯರ್ ಮತ್ತು ವೈನ್ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ಲೈಸೆನ್ಸ್‌ನ ನಿಯಮದ ಪ್ರಕಾರ, ಕಿರಾಣಿ ಅಂಗಡಿಯ ಒಟ್ಟು ವ್ಯಾಪ್ತಿಯ 10%  ಶೇ ಸ್ಥಳದಲ್ಲಿ ಮಾತ್ರ ಬಿಯರ್ ಮತ್ತು ವೈನ್‌ಗಳನ್ನು ದಾಸ್ತಾನು ಇಡಬಹುದಾಗಿದೆ. ಈ ಶಿಫಾರಸಿನ ಬಗ್ಗೆ ಸಾರ್ವಜನಿಕರ ಸಲಹೆ, ಟಿಪ್ಪಣಿಯನ್ನು ಪಡೆದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News