ಗಡಿ ಉದ್ವಿಗ್ನತೆಗೆ ಅರ್ಥಪೂರ್ಣ ಪರಿಹಾರ ಹುಡುಕಲು ಭಾರತ- ಚೀನಾ ವಿಫಲ: ರಾಜನಾಥ್ ಸಿಂಗ್
ಹೊಸದಿಲ್ಲಿ, ಡಿ.29: ಭಾರತ- ಚೀನಾ ದೇಶಗಳ ಮಿಲಿಟರಿ ಹಾಗೂ ರಾಜತಾಂತ್ರಿಕ ಅಧಿಕಾರಿಗಳ ಮಧ್ಯೆ ಹಲವು ಸುತ್ತಿನ ಮಾತುಕತೆ ನಡೆದರೂ ಗಡಿ ಉದ್ವಿಗ್ನತೆಗೆ ಅರ್ಥಪೂರ್ಣ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಉಭಯ ದೇಶಗಳ ನಡುವೆ ಗಡಿಭಾಗದಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ರೂಪಿಸಲು ಹಲವು ಸುತ್ತಿನ ಮಾತುಕತೆ ನಡೆದರೂ ಇದುವರೆಗೆ ಯಾವುದೇ ಫಲ ನೀಡಿಲ್ಲ. ಶೀಘ್ರವೇ ಮಿಲಿಟರಿ ಮಟ್ಟದಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಆದರೆ ಗಡಿಭಾಗದಲ್ಲಿ ಈಗಿರುವ ಸ್ಥಿತಿ ಬದಲಾಗದೆ ಭಾರತ ಅಲ್ಲಿ ನಿಯೋಜಿಸಿರುವ ಸೇನಾಬಲವನ್ನು ಕಡಿತಗೊಳಿಸುವುದಿಲ್ಲ . ಚೀನಾ ಕೂಡಾ ಸೇನೆಯನ್ನು ಕಡಿತಗೊಳಿಸುವುದಿಲ್ಲ ಎಂದು ಭಾವಿಸುತ್ತೇನೆ. ಆದರೂ, ಹಲವು ಸುತ್ತಿನ ಮಾತುಕತೆಯ ಬಳಿಕ ಅಂತಿಮವಾಗಿ ಗುಣಾತ್ಮಕ ಫಲಿತಾಂಶ ಹೊರಬೀಳುವ ವಿಶ್ವಾಸ ನಮಗಿದೆ ಎಂದು ಸುದ್ಧಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ರಾಜನಾಥ್ ಸಿಂಗ್ ಹೇಳಿದ್ದಾರೆ. ತನಗೆ ಸೇರಿದ ಗಡಿಭಾಗದಲ್ಲಿ ಮತ್ತು ನಿಯಂತ್ರಣ ರೇಖೆಯುದ್ದಕ್ಕೂ ಮೂಲಸೌಕರ್ಯ ಅಭಿವೃದ್ಧಿಗೆ ಚೀನಾ ಹಲವು ಕ್ರಮಗಳನ್ನು ಕೈಗೊಂಡಿದೆ. ಭಾರತವೂ ಗಡಿಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ನಮಗೆ ಯಾವುದೇ ದೇಶದ ಮೇಲೆ ಆಕ್ರಮಣ ನಡೆಸುವ ಉದ್ದೇಶವಿಲ್ಲ .ವಿಸ್ತರಣಾವಾದಿ ರಾಷ್ಟ್ರವೊಂದು ನಮ್ಮ ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದರೆ , ಆ ಪ್ರಯತ್ನವನ್ನು ವಿಫಲಗೊಳಿಸಲು ಭಾರತ ಶಕ್ತವಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಚೀನಾದೊಂದಿಗಿನ ಮಾತುಕತೆ ಮುಂದುವರಿಯಲಿದೆ. ಆದರೆ ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗುವ ಯಾವ ಕ್ರಮವನ್ನೂ ಭಾರತ ಸಹಿಸದು. ಸೌಮ್ಯಧೋರಣೆ ನಮ್ಮದಾಗಿದ್ದರೂ ನಮ್ಮ ಆತ್ಮಾಭಿಮಾನಕ್ಕೆ ಘಾಸಿಯಾದರೆ ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.