ಶೇ.77.5ರಷ್ಟು ಸಣ್ಣ ಉದ್ಯಮಗಳು ಸಾಲ ಮರುಪಾವತಿ ಸ್ತಂಭನ ಅವಕಾಶವನ್ನು ಬಳಸಿಕೊಂಡಿದ್ದವು:ಆರ್‌ಬಿಐ ವರದಿ

Update: 2020-12-30 18:25 GMT

ಮುಂಬೈ,ಡಿ.30: ಈ ವರ್ಷದ ಪೂರ್ವಾರ್ಧದಲ್ಲಿ ಬ್ಯಾಂಕುಗಳು ಮುಂದಿರಿಸಿದ್ದ ಸಾಲ ಮರುಪಾವತಿ ಸ್ತಂಭನ ಅವಕಾಶವನ್ನು ಹೆಚ್ಚುಕಡಿಮೆ ಪ್ರತಿ ಐದರಲ್ಲಿ ನಾಲ್ಕು ಸಣ್ಣ ಉದ್ಯಮಗಳು ಬಳಸಿಕೊಂಡಿದ್ದವು ಮತ್ತು ಇದು ಕೋವಿಡ್-19 ಲಾಕ್‌ಡೌನ್ ನಿಂದಾಗಿ ಅವು ಎದುರಿಸಿದ್ದ ಒತ್ತಡವನ್ನು ಸೂಚಿಸುತ್ತಿದೆ ಎಂದು ಆರ್‌ಬಿಐ ಬಿಡುಗಡೆಗೊಳಿಸಿರುವ ‘ಭಾರತದಲ್ಲಿ ಬ್ಯಾಂಕಿಂಗ್‌ನ ಪ್ರವೃತ್ತಿ ಮತ್ತು ಪ್ರಗತಿ 2019-20’ ವರದಿಯು ತಿಳಿಸಿದೆ.

ಬ್ಯಾಂಕುಗಳು ಶೇ.77.5ರಷ್ಟು ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ)ಗಳಿಗೆ ಸಾಲ ಮರುಪಾವತಿ ಸ್ತಂಭನ ಸೌಲಭ್ಯವನ್ನು ಒದಗಿಸಿದ್ದವು ಮತ್ತು ಉದ್ಯಮ ಕ್ಷೇತ್ರಕ್ಕೆ ಒಟ್ಟು ಸಾಲಗಳ ಪೈಕಿ ಈ ಉದ್ಯಮಗಳ ಪಾಲು ಶೇ.69.29ರಷ್ಟಿದೆ ಎಂದು ವರದಿಯು ಬೆಟ್ಟು ಮಾಡಿದೆ.

ಖಾಸಗಿ ಬ್ಯಾಂಕುಗಳು ಶೇ.83.38ರಷ್ಟು ಎಂಎಸ್‌ಎಂಇಗಳಿಗೆ ಮತ್ತು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್(ಪಿಎಸ್‌ಬಿ)ಗಳು ತಮ್ಮ ಶೇ.64.11ರಷ್ಟು ಗ್ರಾಹಕರಿಗೆ ಸ್ತಂಭನ ಸೌಲಭ್ಯವನ್ನು ಒದಗಿಸಿದ್ದವು ಎಂದು ವರದಿಯು ತಿಳಿಸಿದೆ.

ಆರ್‌ಬಿಐ ಇದೇ ಮೊದಲ ಬಾರಿಗೆ 12 ಪಿಎಸ್‌ಬಿಗಳು,21 ಖಾಸಗಿ ಕ್ಷೇತ್ರದ ಬ್ಯಾಂಕುಗಳು,42 ವಿದೇಶಿ ಬ್ಯಾಂಕುಗಳು,39 ನಗರ ಸಹಕಾರಿ ಬ್ಯಾಂಕುಗಳು,10 ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಮತ್ತು 73 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಂದ ಮಾಹಿತಿಗಳನ್ನು ಕ್ರೋಡೀಕರಿಸಿ ಸಾಲ ಮರುಪಾವತಿ ಸ್ತಂಭನ ಕುರಿತು ಸಮಗ್ರ ವರದಿಯನ್ನು ಬಿಡುಗಡೆಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News