ಭಾರತದಲ್ಲಿ ಕೋವಿಡ್ ಲಸಿಕೆ : ಹೊಸ ವರ್ಷಕ್ಕೆ ಹೊಸ ಸುದ್ದಿ...

Update: 2020-12-31 03:36 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಆಕ್ಸ್‌ಫರ್ಡ್ ಮತ್ತು ಆಸ್ಟ್ರಾಝೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಬ್ರಿಟನ್ ಅನುಮತಿ ನೀಡಿದೆ. ಇದು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವಾಗಲಿದ್ದು, ಜನವರಿ ಆರಂಭದಲ್ಲೇ ದೇಶದಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

ಬ್ರಿಟನ್, ಆಕ್ಸ್‌ಫರ್ಡ್ ಆಸ್ಟ್ರಾಝೆನೆಕಾ ಲಸಿಕೆಗೆ ಅನುಮೋದನೆ ನೀಡಿದ ಪ್ರಥಮ ದೇಶ. ಭಾರತದ ಔಷಧ ನಿಯಂತ್ರಣ ಸಂಸ್ಥೆ ಕೂಡಾ ಇದೇ ಕ್ರಮವನ್ನು ಅನುಸರಿಸುವ ಸಾಧ್ಯತೆ ಇದ್ದು, ಲಸಿಕೆಯ ಪ್ರತಿರೋಧಶಕ್ತಿಗೆ ಸಂಬಂಧಿಸಿದಂತೆ ಬುಧವಾರ ಸಭೆ ಸೇರಿದ ತಜ್ಞರ ಸಮಿತಿ ಹೆಚ್ಚಿನ ಮಾಹಿತಿ ಕೇಳಿದ್ದು, ಇದರ ಶಿಫಾರಸ್ಸಿನ ಆಧಾರದಲ್ಲಿ ಭಾರತ ತನ್ನ ನಿರ್ಧಾರ ಕೈಗೊಳ್ಳಲಿದೆ. ಆದ್ದರಿಂದ ತುರ್ತು ಸಂದರ್ಭಗಳಲ್ಲಿ ಲಸಿಕೆ ಬಳಕೆಗೆ ಇನ್ನೂ ಕೆಲ ದಿನ ಬೇಕಾಗಬಹುದು. ಸಮಿತಿ ಶುಕ್ರವಾರ ಮತ್ತೆ ಸಭೆ ಸೇರಲಿದ್ದು, ಜನವರಿ ಮೊದಲಾರ್ಧದಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ.

ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಲ್ಲಿಸಿದ ಪರಿಷ್ಕೃತ ಅಂಕಿ ಅಂಶಗಳನ್ನು ಸಮಿತಿ ವಿಶ್ಲೇಷಿಸಿದ್ದು, ದೇಶೀಯವಾಗಿ ಅಭಿವೃದ್ಧಿಪಡಿಸಿದ ಭಾರತ್ ಬಯೋಟೆಕ್‌ನ ಅಂಶಗಳನ್ನು ಕೂಡಾ ವಿಶ್ಲೇಷಿಸಿದೆ. ಈಗಾಗಲೇ ಕೋವಿಶೀಲ್ಡ್‌ನ 40-50 ದಶಲಕ್ಷ ಲಸಿಕೆಗಳು ದಾಸ್ತಾನು ಇವೆ ಎಂದು ಎಸ್‌ಐಐ ಹೇಳಿದೆ. ಪ್ರತಿ ವಾರ ಈ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಭರವಸೆ ನೀಡಿದೆ.

ಇದನ್ನು ಅತ್ಯಂತ ವ್ಯಾಪಕವಾಗಿ ಬಳಸಬಹುದಾಗಿದ್ದು, ಇದರ ಬೆಲೆ ಪ್ರತಿ ಡೋಸ್‌ಗೆ 3 ರಿಂದ 4 ಡಾಲರ್ ಮಾತ್ರ ಇರಲಿದೆ ಎಂದು ವರದಿಗಳು ಹೇಳಿವೆ. ಜತೆಗೆ ಇದನ್ನು ಹಲವು ವಾರಗಳವರೆಗೆ ಸಾಮಾನ್ಯ ರೆಫ್ರಿಜರೇಟರ್‌ಗಳಲ್ಲಿ ಸಾಗಾಣಿಕೆ ಮಾಡಲು ಮತ್ತು ದಾಸ್ತಾನು ಮಾಡಲು ಅವಕಾಶವಿದೆ ಎಂದು ತಿಳಿದುಬಂದಿದೆ. ಪಿಫ್‌ಝರ್-ಬಯೋಎನ್‌ಟೆಕ್ ಲಸಿಕೆಯನ್ನು ಮೈನಸ್ 70 ಡಿಗ್ರಿಯಲ್ಲಿ ಮತ್ತು ಮೊಡೆರ್ನಾ ಲಸಿಕೆಯನ್ನು ಮೈನಸ್ 20 ಡಿಗ್ರಿಯಲ್ಲಿ ದಾಸ್ತಾನು ಮಾಡಬೇಕಿದ್ದು, ಇದು ದುಬಾರಿಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News