ರೈತರು ಖಾಲಿಸ್ತಾನಿಗಳಲ್ಲ, ಅನ್ನದಾತರು : ರಾಜನಾಥ್ ಸಿಂಗ್
ಹೊಸದಿಲ್ಲಿ : ಕೇಂದ್ರದ ಹೊಸ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು "ಖಾಲಿಸ್ತಾನಿ" ಅಥವಾ "ನಕ್ಸಲೀಯರು" ಎಂದು ಕರೆದಿರುವುದು ವಿಷಾದನೀಯ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ರೈತರು ನಿಜವಾಗಿ ಅನ್ನದಾತರು; ಅವರಿಗೆ ಅತ್ಯುನ್ನತ ಗೌರವ ಇದೆ ಎಂದು ಹೇಳಿದ್ದಾರೆ.
ಎಡಪಂಥೀಯ ಮತ್ತು ಮಾವೋವಾದಿ ಶಕ್ತಿಗಳು ಪ್ರತಿಭಟನೆಯಲ್ಲಿ ನುಸುಳಿಕೊಂಡಿವೆ ಎಂದು ಕೆಲ ಕೇಂದ್ರ ಸಚಿವರು ಹೇಳಿಕೆ ನೀಡಿದ ಬೆನ್ನಲ್ಲೇ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ರಾಜನಾಥ್ ಸಿಂಗ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೈತ ಚಳವಳಿಯಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ನೋವಾಗಿದೆ. ರೈತರ ಬೇಡಿಕೆಗಳ ಬಗ್ಗೆ ಉದಾಸೀನ ತೋರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಅವರಿಗೆ ನಮ್ಮ ಗೌರವ ಸಲ್ಲುತ್ತದೆ. ನಮ್ಮ ರೈತರನ್ನು ನಾವು ತಲೆಬಾಗಿ ಗೌರವಿಸುತ್ತೇವೆ. ಅವರು ನಮ್ಮ ಅನ್ನದಾತರು" ಎಂದು ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.
ಆದಾಗ್ಯೂ ಪ್ರತಿಭಟನಾ ನಿರತ ರೈತರು ಪ್ರಧಾನಿ ಮೋದಿ ವಿರುದ್ಧ ಮಾನಹಾನಿಕರ ಪದಗಳನ್ನು ಬಳಸಬಾರದು ಎಂದು ರಕ್ಷಣಾ ಸಚಿವರು ಮನವಿ ಮಾಡಿದರು. ಪ್ರಧಾನಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು ನನಗೆ ವೈಯಕ್ತಿಕವಾಗಿ ನೋವು ತಂದಿದೆ. ಪ್ರಧಾನಿ ಹುದ್ದೆ ಒಂದು ಸಂಸ್ಥೆಯಾಗಿದ್ದು, ಇದು ಇಡೀ ದೇಶವನ್ನು ಪ್ರತಿನಿಧಿಸುವಂಥದ್ದು" ಎಂದು ಅಭಿಪ್ರಾಯಪಟ್ಟರು. ಕೃಷಿ ಕಾನೂನುಗಳ ಪ್ರತಿ ಸೆಕ್ಷನ್ ಬಗ್ಗೆಯೂ ತಾರ್ಕಿಕ ಚರ್ಚೆಗೆ ರೈತರು ಒಪ್ಪಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.