ಭಾರತ-ಚೀನಾ ಗಡಿಭಾಗದಲ್ಲಿರುವ ಗ್ರಾಮಗಳ ಅಭಿವೃದ್ಧಿಗೆ ಯೋಜನೆ ಸಿದ್ಧ: ಉತ್ತರಾಖಂಡ ಸಚಿವ
ಡೆಹ್ರಾಡೂನ್, ಡಿ.31: ವಲಸೆ ತಡೆಯಲು ಹಾಗೂ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಭಾರತ-ಚೀನಾ ಗಡಿಭಾಗದಲ್ಲಿರುವ ಸುಮಾರು 100 ಗ್ರಾಮಗಳನ್ನು ಅಂತರಾಷ್ಟ್ರೀಯ ಗಡಿ ಅಭಿವೃದ್ಧಿ ಯೋಜನೆಯಡಿ ಅಭಿವೃದ್ಧಿಪಡಿಸುವ ನೀಲನಕ್ಷೆ ಸಿದ್ಧವಾಗಿದ್ದು ಕೇಂದ್ರದ ಅನುಮೋದನೆಗೆ ರವಾನಿಸಲಾಗುವುದು ಎಂದು ಉತ್ತರಾಖಂಡದ ಕೃಷಿ ಸಚಿವ ಸುಬೋಧ್ ಉನಿಯಾಲ್ ಹೇಳಿದ್ದಾರೆ.
ಚೀನಾದೊಂದಿಗಿನ ಗಡಿಭಾಗದಲ್ಲಿರುವ ಜಿಲ್ಲೆಗಳ 11 ವಿಭಾಗಗಳ 100 ಗ್ರಾಮಗಳನ್ನು ಗುರುತಿಸಲಾಗಿದ್ದು ಇವುಗಳನ್ನು ಮಾದರಿ ಗ್ರಾಮವನ್ನಾಗಿ ರೂಪಿಸಲಾಗುವುದು. ಇವುಗಳನ್ನು ಸಮಗ್ರ ಮಾದರಿ ಕೃಷಿ ಗ್ರಾಮಗಳನ್ನಾಗಿ ಅಭಿವೃದ್ಧಿಗೊಳಿಸುವ ಮೂಲಕ ಉದ್ಯೋಗಾವಕಾಶ ಹೆಚ್ಚಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಗಡಿಭಾಗದ ಗ್ರಾಮಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗೆ ಪ್ರೋತ್ಸಾಹದ ಜತೆಗೆ, ಮೀನುಗಾರಿಕೆ, ಪಶು ಸಂಗೋಪನೆ, ಹೈನುಗಾರಿಕೆ, ಜೇನು ನೊಣ ಸಾಕಣೆ ಮತ್ತಿತರ ಯೋಜನೆಗಳ ಮೂಲಕ ಕೃಷಿಕರ ಆದಾಯ ಹೆಚ್ಚಿಸುವ ಉದ್ದೇಶವಿದೆ. ಜೊತೆಗೆ ಕಾರ್ಮಿಕರ ವಲಸೆಯನ್ನು ತಡೆಯುವುದು ಕಾರ್ಯತಂತ್ರದ ದೃಷ್ಟಿಕೋನದಿಂದ ಮಹತ್ವದ್ದಾಗಿದೆ ಎಂದವರು ಹೇಳಿದ್ದಾರೆ.