10 ತಿಂಗಳ ಬಳಿಕ ಶಾಲಾ ಕಾಲೇಜು ಆವರಣದಲ್ಲಿ ಮಕ್ಕಳ ಕಲರವ

Update: 2021-01-01 05:43 GMT

ಮಂಗಳೂರು, ಜ.1: ಸುಮಾರು 10 ತಿಂಗಳ ಬಳಿಕ ರಾಜ್ಯ ಸರಕಾರದ ಸೂಚನೆಯಂತೆ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಕಾಲೇಜುಗಳು ಇಂದಿನಿಂದ ಆರಂಭಗೊಂಡಿದೆ. 6ರಿಂದ 9ನೇ ತರಗತಿ ವರೆಗಿನ ಮಕ್ಕಳು ‘ವಿದ್ಯಾಗಮ-2’ ಕಾರ್ಯಕ್ರಮಕ್ಕಾಗಿ ಶಾಲೆಗಳಲ್ಲಿ ಹಾಜರಾಗಿದ್ದಾರೆ.

ಕಳೆದ ಮಾರ್ಚ್ ತಿಂಗಳ ಅಂತ್ಯದಿಂದ ಶಾಲಾ ಕಾಲೇಜುಗಳಿಂದ ಹೊರಗುಳಿದ್ದಿದ್ದ ವಿದ್ಯಾರ್ಥಿಗಳು 2021ರ ಹೊಸ ವರ್ಷದ ಆರಂಭದ ದಿನದಿಂದ  ಹುರುಪಿನಿಂದಲೇ ಶಾಲಾ ಕಾಲೇಜು ಆವರಣ ಪ್ರವೇಶಿಸಿದ್ದಾರೆ.

ಮಕ್ಕಳನ್ನು ಸ್ವಾಗತಿಸುವ ಸಲುವಾಗಿ ಕಳೆದ ಕೆಲ ದಿನಗಳ ಹಿಂದಿನಿಂದಲೇ ಶಾಲಾ ಕಾಲೇಜು ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸಿದ್ಧತೆ ನಡೆಸಿದ್ದರು. ಕೆಲವು ಸರಕಾರಿ ಶಾಲೆಗಳನ್ನು ತಳಿರು ತೋರಣ, ಸ್ವಾಗತ ಕಮಾನುಗಳೊಂದಿಗೆ ಸಜ್ಜುಗೊಂಡಿವೆ.

ತರಗತಿಗಳಿಗೆ ಹಾಗೂ ವಿದ್ಯಾಗಮಕ್ಕೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳು ಪಾಲಕರ ಅನುಮತಿ ಪತ್ರಗಳೊಂದಿಗೆ ಹಾಜರಾಗಿದ್ದಾರೆ. ಅದೇರೀತಿ ಎಲ್ಲ ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೊಳಗಾಗಿ ನೆಗೆಟಿವ್ ವರದಿ ಹೊಂದಿದ್ದವರು ಮಾತ್ರ ಶಾಲೆಗೆ ಆಗಮಿಸಿದ್ದಾರೆ.

ತಳಿರು-ತೋರಣಗಳಿಂದ ಸಿಂಗರಿಸಿಕೊಂಡಿರುವ ಶಾಲಾ-ಕಾಲೇಜುಗಳು ಸುಮಾರು 10 ತಿಂಗಳ ಬಳಿಕ ಮಕ್ಕಳನ್ನು ಸ್ವಾಗತಿಸಿದವು.  ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಶಾಲಾ ಕೊಠಡಿಗಳು, ಶಾಲಾ ಆವರಣ ಹಾಗೂ ಶೌಚಾಲಯಗಳ ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಲಾಗಿದೆ.

6 ಮತ್ತು 7ನೇ ತರಗತಿ ಮಕ್ಕಳಿಗೆ ವಿದ್ಯಾಗಮ ತರಗತಿಗಳು ಪ್ರತಿದಿನ ಬೆಳಗ್ಗೆ 10ರಿಂದ 12:30-1ರವರೆಗೆ ನಡೆಯಲಿದೆ. 8 ಮತ್ತು 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಅಪರಾಹ್ನ 2ರಿಂದ 4:30ರವರೆಗೆ ಶಾಲಾ ಆವರಣದಲ್ಲಿ ನಡೆಯಲಿದೆ. ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರತಿದಿನ 10:ರಿಂದ 1ರವರೆಗೆ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News