ಅಬ್ಬಕ್ಕ ಭವನ ನಿರ್ಮಾಣ ವಿಚಾರದಲ್ಲಿ ತಾರತಮ್ಯ: ದಿನಕರ್ ಉಳ್ಳಾಲ ಆರೋಪ

Update: 2021-01-01 06:58 GMT

ಉಳ್ಳಾಲ, ಜ.1: ಅಬ್ಬಕ್ಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಒಂಭತ್ತು ವರ್ಷಗಳೆ ಉರುಳಿವೆ. ಆದರೆ ಕೆಲಸ ಆಗುತ್ತಿಲ್ಲ. ಸರಕಾರ ಹಣ ಬಿಡುಗಡೆ ಮಾಡಿದರೂ ಜೀಲ್ಲಾಡಳಿತ ಯಾವುದೇ ತರಾತುರಿಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಜಾಗ ಇದೆ. ಹೌಸಿಂಗ್ ಬೋರ್ಡ್ ನವರು ಮಾಡಬೇಕಾದ ಕೆಲಸ ಇನ್ನೂ ಆಗಿಲ್ಲ. ಅಬ್ಬಕ್ಕ ಭವನ ನಿರ್ಮಾಣ ವಿಚಾರದಲ್ಲಿ ತಾರತಮ್ಯ ಎಸಗಲಾಗಿದೆ. ಪಕ್ಕದಲ್ಲಿ ಬೇರೆ ಭವನ ನಿರ್ಮಾಣ ಆಗುವ ಮೊದಲು ಅಬ್ಬಕ್ಕ ಭವನ ನಿರ್ಮಾಣ ಆಗಬೇಕು. ಇದಕ್ಕಾಗಿ ಮೌನ ಪ್ರತಿಭಟನೆ ಮಾಡುತ್ತಿದ್ದೇವೆ. ಬೇರೆ ಭವನ ಆಗುವ ಮೊದಲು ನಮ್ಮ ಭವನ ಆಗಬೇಕು ಎಂಬುದು ನಮ್ಮ ಬೇಡಿಕೆ. ಇದಕ್ಕೆ ಹೋರಾಟ ಮಾಡಲು ಸಿದ್ದರಿದ್ದೇವೆ ಎಂದು ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ ಹೇಳಿದ್ದಾರೆ.

ರಾಣಿ ಅಬ್ಬಕ್ಕಳಿಗೆ ಅವಮಾನ, ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ತೊಕ್ಕೊಟ್ಟು ಅಬ್ಬಕ್ಕ ಭವನ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ನಡೆದ ಮೌನ ಪ್ರತಿಭಟನೆ ಹಾಗೂ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಭವನ, ಬ್ಯಾರಿ ಭವನ ಆಗಬೇಕು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಭಾವನೆಗಳ ಸಂಖ್ಯೆ ತೀರಾ ಕಡಿಮೆ ಇದೆ. ಬ್ಯಾರಿ ಭವನ ರಚನೆ ನಾವು ಒಂದಾಗಿ ಮಾಡಬೇಕು. ಇದಕ್ಕಾಗಿ ನಾವು ಗಾಂಧಿ ಪ್ರತಿಮೆ ಬಳಿ ಹೋರಾಟ ಮಾಡಿದ್ದೇವೆ. ಬ್ಯಾರಿ ಭವನ ಬ್ಯಾರಿ ಭಾಷೆಯ ಬೆಳವಣಿಗೆಗೋಸ್ಕರ ಇದೆಯೇ ಹೊರತು ಜನಾಂಗದ ಅಭಿವೃದ್ಧಿಗೆ ಅಲ್ಲ ಎಂದರು.

ಅಬ್ಬಕ್ಕ ಭವನ ನಿರ್ಮಾಣಕ್ಕೆ ಸರಕಾರ ಹಣ ಬಿಡುಗಡೆ ಮಾಡಿದೆ. ಎಲ್ಲರ ಒಪ್ಪಿಗೆ ಇದೆ. ಅಬ್ಬಕ್ಕ ಭವನ ಅಂದರೆ ಅದರಲ್ಲಿ ಬ್ಯಾರಿ ಜನಾಂಗ ಬೇರೆ, ಮಲೆಯಾಳಿ ಜನಾಂಗ ಬೇರೆ ಎಂಬ ಪ್ರಶ್ನೆ ಬರುವುದಿಲ್ಲ. ಅದು ಸಾಂಸ್ಕೃತಿಕ ಅಭಿಮಾನದ ಸಂಕೇತ. ಈ ಭವನ ಒಂದು ವರ್ಷದೊಳಗೆ ಆಗಬೇಕು ಎಂದು ಕಲ್ಕೂರ ಒತ್ತಾಯಿಸಿದರು‌.

ಪ್ರತಿಭಟನಾ ಕಾರರು ಕಪ್ಪು ಪಟ್ಟಿ ಧರಿಸಿದ್ದರು. ಈ ವರ್ಷದ ಅಂತ್ಯದೊಳಗೆ ಅಬ್ಬಕ ಭವನ ಆಗಬೇಕು. ಮೊದಲು ನಮ್ಮ ಭವನ ಆಗಬೇಕು. ಬೇರ ಭವನ ಇದ್ದರೆ ಅದು ಅನತಿ ದೂರದಲ್ಲಿ ಆಗಬೇಕು. ಶೀಘ್ರದಲ್ಲೇ ಕಾರ್ಯ ಪ್ರಕ್ರಿಯೆ ಆರಂಭ ಆಗಬೇಕು ಎಂಬುದು ಪ್ರತಿಭಟನಾಕಾರರ ಬೇಡಿಕೆ ಆಗಿತ್ತು.

ಇವರಿಗೆ ಭಾರತ ಹಿಂದೂ ಸಭಾ ದ ಸದಸ್ಯರು, ಸ್ಥಳೀಯ ರಾಜಕಾರಣಿಗಳು, ಉದ್ಯಮಿಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಕೈ ಜೋಡಿಸಿದ್ದರು.

ಅಬ್ಬಕ್ಕ ಭವನ ಸಮಿತಿಯ ಸ್ವಾಗತಾಧ್ಯಕ್ಷ ಜಯರಾಮ ಶೆಟ್ಟಿ,  ಆನಂದ ಅಸೈಗೋಳಿ, ಸದಾನಂದ ಬಂಗೇರ, ಶಶಿಕಾಂತ, ಆಲಿಯಬ್ಬ ವಾಸುದೇವ, ಶಶಿಕಾಂತಿ, ಸತೀಶ್ ಭಂಡಾರಿ, ರಾಘವ ಮಾಸ್ಟರ್ ಪವಿತ್ರಾ ಗಟ್ಟಿ, ಭಗವಾನ್ ದಾಸ್, ಮಾಧವಿ ಉಳ್ಳಾಲ, ಅನುಪಮಾ, ಲತಾ ಶ್ರೀಧರ್, ರತ್ನಾವತಿ ಬೈಕಾಡಿ, ಶಶಿಕಲಾ ಗಟ್ಟಿ, ಸೀತಾರಾಮ ಬಂಗೇರ, ಅಬ್ದುಲ್ ಅಝೀಝ್ ಹಕ್  ಹಾಗೂ ಅಖಿಲ ಭಾರತ ಹಿಂದೂ ಸಭಾದ ಜಿಲ್ಲಾಧ್ಯಕ್ಷ ಡಾ‌.ಎಲ್.ಕೆ.ಸುವರ್ಣ, ರಾಜೇಶ್ ಪೂಜಾರಿ, ಲೋಕೇಶ್ ಉಳ್ಳಾಲ, ಜಗದೀಶ್ ಪಂಪ್ ವೆಲ್, ಡಾ.ಅನುರಾಧಾ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News