ಮನಪಾ: ನೀರಿನ ಶುಲ್ಕ, ಉದ್ದಿಮೆ ಪರವಾನಿಗೆ ಆನ್‌ಲೈನ್ ಪ್ರಕ್ರಿಯೆಗೆ ಚಾಲನೆ

Update: 2021-01-01 14:13 GMT

ಮಂಗಳೂರು, ಜ.1: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೀರಿನ ಶುಲ್ಕ ಪಾವತಿ ಹಾಗೂ ಉದ್ದಿಮೆ ಹೊಸ ಪರವಾನಿಗೆ ಪಡೆಯುವುದು ಅಥವಾ ನವೀಕರಣದ ಆನ್‌ಲೈನ್ ಪ್ರಕ್ರಿಯೆಗೆ ಇಂದು ಪಾಲಿಕೆ ಸಭಾಂಗಣದಲ್ಲಿ ಮೇಯರ್ ದಿವಾಕರ ಪಾಂಡೇಶ್ವರ ಅವರು ಚಾಲನೆ ನೀಡಿದರು.
ನೀರಿನ ಶುಲ್ಕವನ್ನು ಆನ್‌ಲೈನ್ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕ್‌ನ ಮೂಲಕ ಪಾವತಿಸಬಹುದಾಗಿದ್ದರೆ, ಉದ್ದಿಮೆ ಪರವಾನಿಗೆಗಾಗಿ ಎಂಸಿಸಿ ಟ್ರೇಡ್ ಲೈಸೆನ್ಸ್ ಎಂಬ ಆ್ಯಪ್ ಆರಂಭಿಸಲಾಗಿದೆ ಎಂದು ಮೇಯರ್ ದಿವಾಕರ ಪಾಂಡೇಶ್ವರ ಈ ಸಂದರ್ಭ ತಿಳಿಸಿದರು.

ನೀರಿನ ಶುಲ್ಕವನ್ನು ಪಾಲಿಕೆಯ ವೆಬ್‌ಸೈಟ್  www.mangalurucity.mrc.gov.inಗೆ ಲಾಗಿನ್ ಆಗಿ ಅಲ್ಲಿ ಸ್ಕ್ರೋಲ್ ಆಗುತ್ತಿರುವ ಆನ್‌ಲೈನ್ ನೀರಿನ ಬಿಲ್ಲಿನ ಪಾವತಿಯನ್ನು ಕ್ಲಿಕ್ ಮಾಡುವ ಮೂಲಕ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ನೀರಿನ ಶುಲ್ಕ ಪಾವತಿಸಬಹುದು. ಗ್ರಾಹಕರು ಯುಪಿಐ, ರುಪೇ, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಹಣವನ್ನು ಪಾವತಿಸಬಹುದು. ನಗರದಲ್ಲಿ 93000 ಗೃಹ ಬಳಕೆಯ ನೀರಿನ ಸಂಪರ್ಕವಿದ್ದು, ಎಂಪಿಡಬ್ಲ್ಯು ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡಿ ನೀರಿನ ಶುಲ್ಕವನ್ನು ಜನರೇಟ್ ಮಾಡುತ್ತಾರೆ. ಪ್ರತಿ 60 ವಾರ್ಡ್‌ಗಳಿಗೂ ಒಬ್ಬರಂತೆ ಕಾರ್ಯಕರ್ತರನ್ನು ನಿಯೋಜಿಸಲಾಗಿದ್ದು, ಪ್ರತಿ ತಿಂಗಳು ಅವರು ನೀರಿನ ಶುಲ್ಕ ನೀಡುವ ವ್ಯವಸ್ಥೆಯ ಜತೆಗೆ ಸ್ಥಳದಲ್ಲೇ ಅವರ ಬಳಿ ಇರುವ ಕ್ಯೂಆರ್ ಕೋಡ್ ಮೂಲಕವೂ ನೀರಿನ ಬಿಲ್ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪಾಲಿಕೆ ಉಪ ಆಯುಕ್ತ ಡಾ. ಸಂತೋಷ್ ಕುಮಾರ್ ಮಾಹಿತಿ ನೀಡಿದರು.

ಈ ಸಂದರ್ಭ ಮನಪಾ ಉಪ ಮೇಯರ್ ವೇದಾವತಿ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ, ಶರತ್, ಜಗದೀಶ್ ಶೆಟ್ಟಿ, ಕಿರಣ್ ಕುಮಾರ್, ಪರಿಸರ ಇಂಜಿನಿಯರ್ ಮಧು ಮೊದಲಾದವರು ಉಪಸ್ಥಿತರಿದ್ದರು.

ಈ ತಿಂಗಳಲ್ಲಿ ಮತ್ತೆ ನೀರಿನ ಅದಾಲತ್
ಕಳೆದ ತಿಂಗಳು ಎರಡು ಬಾರಿ ನೀರಿನ ಅದಾಲತ್ ನಡೆಸಲಾಗಿದ್ದು, ಉತ್ತಮ ಸ್ಪಂದನೆ ದೊರಕಿದೆ. ಸಾಕ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಈ ತಿಂಗಳು ಮತ್ತೆ ನೀರಿನ ಅದಾಲತ್ ನಡೆಸಲಾಗುವುದು.

- ದಿವಾಕರ ಪಾಂಡೇಶ್ವರ, ಮೇಯರ್, ಮನಪಾ.

ನೀರಿನ ಸಂಪರ್ಕ ಅಕ್ರಮವಾಗಿದ್ದರೆ ಸಕ್ರಮಗೊಳಿಸಿ
ಪಾಲಿಕೆಯ ನೀರಿನ ಶುಲ್ಕ ಪಾವತಿ ಹಾಗೂ ಉದ್ದಿಮೆ ಪರವಾನಿಗೆ ವ್ಯವಸ್ಥೆಯನ್ನು ಆನ್‌ಲೈನ್ ವ್ಯವಸ್ಥೆಗೊಳಪಡಿಸುವ ಪ್ರಕ್ರಿಯೆಗೆ ಎಸ್‌ಬಿಐ ಹಾಗೂ ಕೆನರಾ ಬ್ಯಾಂಕ್‌ಗಳು ಕೂಡಾ ಕೈಜೋಡಿಸಿವೆ. ಆನ್‌ಲೈನ್ ವ್ಯವಸ್ಥೆಯಿಂದ ಜನರ ಸಮಯ ಉಳಿತಾಯದ ಜತೆಗೆ ಕಚೇರಿಗೆ ಅಲೆದಾಟದ ಕಿರಿಕಿರಿಯನ್ನೂ ತಪ್ಪಿಸಲಿದೆ. ಸಾರ್ವಜನಿಕರು ತಮ್ಮಲ್ಲಿನ ನೀರಿನ ಸಂಪರ್ಕ ಅಕ್ರಮವಾಗಿದ್ದಲ್ಲಿ ಅದನ್ನು ಸಕ್ರಮಗೊಳಿಸಬೇಕು. ಒಂದು ವೇಳೆ ನಾವೇ ಪತ್ತೆಹಚ್ಚಿದಲ್ಲಿ ಭಾರೀ ದಂಡವನ್ನು ತೆರಬೇಕಾಗುತ್ತದೆ.
-  ಅಕ್ಷಯ್ ಶ್ರೀಧರ್, ಆಯುಕ್ತರು, ಮನಪಾ.

ಟ್ರೇಡ್ ಲೈಸೆನ್ಸ್‌ಗಾಗಿ ಕಚೇರಿಗೆ ಅಲೆದಾಟವಿಲ್ಲ
ಉದ್ದಿಮೆ ಪರವಾನಿಗೆ ನವೀಕರಣ ಅಥವಾ ಹೊಸತಾಗಿ ಪರವಾನಿಗೆ ಪಡೆಯಲು ಗ್ರಾಹಕರು ಇನ್ನು ಮುಂದೆ ಪಾಲಿಕೆಯ ಕಚೇರಿಗೆ ಅಲೆದಾಡುವ ಅಗತ್ಯವಿರುವುದಿಲ್ಲ. ತಮ್ಮ ಮೊಬೈಲ್‌ನಲ್ಲಿ ಪ್ಲೇಸ್ಟೋರ್ ಮೂಲಕ ಎಂಸಿಸಿ ಟ್ರೇಡ್ ಲೈಸೆನ್ಸ್ (ಸದ್ಯ ಈ ಆ್ಯಪ್ ಬಳಕೆಯಲ್ಲಿರುತ್ತದೆ) ಡೌನ್‌ಲೌಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಆ್ಯಪ್ ಮೂಲಕವೇ ಪರವಾನಿಗೆಯ ಸ್ಥಿತಿಗತಿಯನ್ನು ಪರಿಶೀಲಿಸುವ ವ್ಯವಸ್ಥೆಯೂ ಇದೆ. ಆನ್‌ಲೈನ್ ವ್ಯವಸ್ಥೆಯಡಿ ಪಾಲಿಕೆಯು ಎಲ್ಲಾ ಉದ್ದಿಮೆಗಳನ್ನು ಜಿಪಿಎಸ್ ವ್ಯವಸ್ಥೆಗೊಳಪಡಿಸಲಾಗುತ್ತಿದೆ. ಇದರಿಂದ ಪ್ರತಿ ಉದ್ದಿಮೆಯ ನಿಖರವಾದ ವಿಸ್ತೀರ್ಣ ಲಭ್ಯವಾಗಲಿದೆ. ಯಾವುದೇ ರೀತಿಯ ಸಮಸ್ಯೆ ಕಂಡು ಬಂದಾಗ ಆರೋಗ್ಯ ನಿರೀಕ್ಷಕರು ತಪಾಸಣೆ ನಡೆಸಿ ತಪ್ಪು ಮಾಹಿತಿ ನೀಡಿದ್ದಲ್ಲಿ ದಂಡ ಹಾಕುವ ಪ್ರಕ್ರಿಯೆ ನಡೆಯಲಿದೆ ಮಾತ್ರವಲ್ಲದೆ, ಈ ಆನ್‌ಲೈನ್ ವ್ಯವಸ್ಥೆಯನ್ನು ಗೂಗಲ್‌ನೊಂದಿಗೆ ಜೋಡಿಸುವ ವ್ಯವಸ್ಥೆಯೂ ಆಗುವುದರಿಂದ ಯಾವ ಶಾಪ್ ಯಾವ ಏರಿಯಾದಲ್ಲಿದೆ ಎಂಬುದನ್ನು ಕೂಡಾ ಸಾರ್ವಜನಿಕರಿಗೆ ಪತ್ತೆ ಹಚ್ಚಲು ಅನುಕೂಲವಾಗಲಿದೆ.
-ಡಾ. ಸಂತೋಷ್ ಕುಮಾರ್, ಉಪ ಆಯುಕ್ತರು, ಮನಪಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News