ಬೀಟ್ ಪೊಲೀಸ್ ಬಲವರ್ಧನೆ: ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್

Update: 2021-01-01 15:10 GMT

ಮಂಗಳೂರು, ಜ.1: ಮಂಗಳೂರು ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಬೀಟ್ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದು ಮಂಗಳೂರಿನ ನಗರ ನೂತನ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ನಗರದ ಪೊಲೀಸ್ ಆಯುಕ್ತಾಲಯದ ಕಚೇರಿಯಲ್ಲಿ ಶುಕ್ರವಾರ ನಿರ್ಗಮನ ಕಮಿಷನರ್ ವಿಕಾಸ್ ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಗುಲ್ಬರ್ಗದಲ್ಲಿ ಎಸ್ಪಿಯಾಗಿದ್ದಾಗ ಹೊಸ ಪೊಲೀಸ್ ಬೀಟ್ ವ್ಯವಸ್ಥೆ ಜಾರಿಗೆ ತಂದಿದ್ದೆ. ಮಂಗಳೂರಿನಲ್ಲಿ ಪ್ರಸ್ತುತ ಇರುವ ಬೀಟ್ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಬಲವರ್ಧನೆ ಮಾಡುವೆ. ಕೊರೋನ ನಿಯಂತ್ರಣ ಕಾರ್ಯದಲ್ಲಿ ಪೊಲೀಸರು ಹೆಚ್ಚು ತೊಡಗಿಸಿಕೊಂಡಿದ್ದರಿಂದ ಬೀಟ್ ವ್ಯವಸ್ಥೆ ಅಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದಿರಬಹುದು. ಬೀಟ್ ವ್ಯವಸ್ಥೆಯನ್ನು ಮತ್ತೆ ಬಲಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಕಮಿಷನರ್ ಶಶಿಕುಮಾರ್ ಸ್ಪಷ್ಟಪಡಿಸಿದರು.

ಮಂಗಳೂರು ಸುಶಿಕ್ಷಿತ, ಪ್ರಜ್ಞಾವಂತ ನಾಗರಿಕರನ್ನು ಹೊಂದಿರುವ ನಗರ. ಸಾರ್ವಜನಿಕರು ಸಮವಸ್ತ್ರ ಇಲ್ಲದ ಪೊಲೀಸರಂತೆ ಕೆಲಸ ಮಾಡಿ ಪೊಲೀಸರಿಗೆ ಸಹಕಾರ ನೀಡಿದಾಗ ಉತ್ತಮ ಪೊಲೀಸ್ ವ್ಯವಸ್ಥೆ, ಶಾಂತಿ, ಸುವ್ಯವಸ್ಥೆ, ಅಪರಾಧ ರಹಿತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಕಮಿಷನರೆಟ್ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸ್ ಠಾಣೆಗಳ ಸಹಿತ 22 ಪೊಲೀಸ್ ಠಾಣೆಗಳಿದ್ದು 1,000ದಷ್ಟು ಸಿಬಂದಿಗಳಿದ್ದಾರೆ. ಎಲ್ಲ ಅಧಿಕಾರಿ, ಸಿಬ್ಬಂದಿಯನ್ನು ಜತೆಯಲ್ಲಿ ಸೇರಿಸಿ ತಂಡವಾಗಿ ಕೆಲಸ ಮಾಡಿ ಸಾರ್ವಜನಿಕರ ಸುರಕ್ಷತೆಗೆ ಆತಂಕ ಬಾರದಂತೆ ಕೆಲಸ ಮಾಡುತ್ತೇವೆ. ಸಾರ್ವಜನಿಕರ ಸಕ್ರಿಯ ಸಹಭಾಗಿತ್ವದೊಂದಿಗೆ ಉತ್ತಮ ಸೇವೆ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಶಶಿಕುಮಾರ್ ತಿಳಿಸಿದರು.

►ಅಪರಾಧ ಚಟುವಟಿಕೆಗೆ ಕಡಿವಾಣ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಮಿಷನರ್ ನಗರದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದ ಘಟನೆ ಬಗ್ಗೆ ತಿಳಿದಿದೆ. ಇಂತಹ ಕೃತ್ಯವನ್ನು ಯಾವುದೇ ಕಾರಣಕ್ಕೂ ಸಹಿಸದೆ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮಾಡುವಾಗ ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ. ಸರ ಅಪಹರಣ, ಕಳ್ಳತನ ಮೊದಲಾದ ಕೃತ್ಯಗಳನ್ನು ತಡೆಗಟ್ಟಲು ಈಗಾಗಲೇ ನಗರದ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲಾಗುವುದು. ಅಕ್ರಮ ಮರಳುಗಾರಿಕೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆ ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪೊಲೀಸ್ ಪೋನ್-ಇನ್ ಕಾರ್ಯಕ್ರಮ ಪುನಃ ಆರಂಭಿಸಲು ಸಿದ್ಧನಿದ್ದೇನೆ’ ಎಂದು ಹೇಳಿದರು.

►ಸಾಮಾಜಿಕ ಜಾಲತಾಣ ದುರುಪಯೋಗವಾದರೆ ಕ್ರಮ
ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಂಚಾರ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ಬಗ್ಗೆ ಗಮನ ಹರಿಸಲಾಗುವುದು. ವಿದ್ಯಾರ್ಥಿ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಲು ಕೂಡ ಆದ್ಯತೆ ನೀಡಲಾಗುವುದು. ‘112 ತುರ್ತು ಸಹಾಯವಾಣಿ’ಗೆ ರಾಜ್ಯಮಟ್ಟದಲ್ಲಿ ದಿನಕ್ಕೆ ಸುಮಾರು 7 ಲಕ್ಷ ಕರೆಗಳು ಬರುತ್ತಿವೆ. ಇದರಲ್ಲಿ ಅನಾವಶ್ಯಕ ಕರೆಗಳು ಕೂಡ ಸೇರಿವೆ. ಆದರೆ ಈ ತುರ್ತು ಸಹಾಯವಾಣಿಯನ್ನು ಅಗತ್ಯ ಸಂದರ್ಭ ಬಳಸಿಕೊಳ್ಳಬೇಕು. ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಎ.ಗಾಂವ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News