"ಧ್ವಂಸಗೊಂಡ ಮನೆಗಳು, ಒಡೆದ ಗಾಜು, ಗೋಡೆಗಳಲ್ಲಿ 'ಜೈಶ್ರೀರಾಮ್',: ವಿಹಿಂಪ ರ‍್ಯಾಲಿಯ ಬಳಿಕದ ಭಯಭೀತ ಪರಿಸ್ಥಿತಿ

Update: 2021-01-02 07:42 GMT
Indian Express photo: Vishnukant Tiwari

ಮಂಡ್ಸೌರ್‌,ಜ.2: ಹಲವಾರು ಮನೆಗಳಲ್ಲಿ ಛಿದ್ರಗೊಂಡ ಕಿಟಕಿ ಗಾಜು ಮತ್ತು ಬಾಗಿಲು, ಮನೆಗಳ ಗೋಡೆಯ ಮೇಲೆ ಗೀಚಿರುವ ಜೈಶ್ರೀರಾಮ್‌ ಬರಹಗಳು, ತಮ್ಮ ಮನೆಗೆ ಹಿಂದಿರುಗಲು ಭಯಭೀತರಾಗಿರುವ ನಿವಾಸಿಗಳು. ಇದು ಮಂಗಳವಾರ ಮಧ್ಯಪ್ರದೇಶದ ಮಂಡ್ಸೌರ್‌ ಜಿಲ್ಲೆಯ ದೊರಾನಾ ಎಂಬ ಪ್ರದೇಶದಲ್ಲಿ 5000ಕ್ಕಿಂತೂ ಹೆಚ್ಚು ವಿಶ್ವಹಿಂದೂ ಪರಿಷತ್‌ ಸದಸ್ಯರು ನಡೆಸಿದ ರ‍್ಯಾಲಿಯ ನಂತರದ ಚಿತ್ರಣ ಎಂದು indianexpress.com ವರದಿ ಮಾಡಿದೆ.

ರ‍್ಯಾಲಿಗಿಂತ ಮೊದಲೇ ಹಲವಾರು ಸಂದೇಶಗಳು ಸಾಮಾಜಿಕ ತಾಣದಾದ್ಯಂತ ಹರಡುತ್ತಿದ್ದು, ಎಲ್ಲಾ ʼಹಿಂದೂ ಸಹೋದರರುʼ ಅಮಲ್ವಾಡ್‌ ನಿಂದ ದೊರಾನಾವರೆಗೆ ಕೇಸರಿ ಧ್ವಜಗಳೊಂದಿಗೆ ನಡೆಯುವ ಈ ರ‍್ಯಾಲಿಯಲ್ಲಿ ಭಾಗವಹಿಸಲೇಬೇಕು ಎಂಬ ಸಂದೇಶಗಳು ಅದರಲ್ಲಿ ಒಳಗೊಂಡಿದ್ದವು. ಈ ಕಾರಣದಿಂದಾಗಿ ಅಲ್ಲಿನ ಗ್ರಾಮಸ್ಥರು, ನಮಗೆ ರಕ್ಷಣೆ ನೀಡಬೇಕೆಂದು ಪೊಲೀಸರಿಗೆ ಮನವಿ ಸಲ್ಲಿಸಿದ್ದರು. 

ಡಿ.25ರಂದು ವಿಶ್ವಹಿಂದೂ ಪರಿಷತ್‌ ನಡೆಸಿದ್ದ ರ‍್ಯಾಲಿಯಲ್ಲಿ ಮಸೀದಿಯ ಮುಂದೆ ಧ್ವನಿವರ್ಧಕದಲ್ಲಿ ಜೋರಾಗಿ ಹಾಡನ್ನಿಟ್ಟು ನೃತ್ಯ ಮಾಡುವುದನ್ನು ಪೊಲೀಸರು ತಡೆದಿದ್ದರು. ಹಾಗಾಗಿ ಈ ಬಾರಿ ಸಾಮಾಜಿಕ ತಾಣದ ಸಂದೇಶಗಳಲ್ಲಿ, "ಔರಂಗಜೇಬ್‌ ನ ಸಂತತಿಗಳಿಗೆ ನಾವು ಪಾಠ ಕಲಿಸಲೇಬೇಕು" ಎಂಬ ಮೆಸೇಜ್‌ ಗಳು ಕೂಡಾ ಹರಿದಾಡಿದ್ದವು ಎಂದು indianexpress.com ವರದಿ ಮಾಡಿದೆ. ಆದರೆ ಮಂಗಳವಾರ ನಡೆದ ರ‍್ಯಾಲಿಯಲ್ಲಿ ಧ್ವನಿವರ್ಧಕಗಳು ಮಾತ್ರವಲ್ಲದೇ ಮಸೀದಿಯ ಮಿನಾರದ ಮೇಲೆ ಹತ್ತಿ ಕೇಸರಿ ಬಾವುಟವನ್ನೂ ಹಾರಿಸಿದ್ದ ವೀಡಿಯೋಗಳು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿತ್ತು ಎಂದು ವರದಿ ತಿಳಿಸಿದೆ.


ರ್ಯಾಲಿಯ ಸಂದರ್ಭದಲ್ಲಿ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರನ್ನು ದುಷ್ಕರ್ಮಿಗಳು ಬೆನುಹತ್ತಿದ್ದರು ಮತ್ತು ಸ್ವಲ್ಪ ದೂರ ಓಡಿದ ಬಳಿಕ ಅವರು ಹಿಂದಿರುಗಿದರು ಎಂದು ಮಹಿಳೆಯರು ಆರೋಪಿಸಿದ್ದಾರೆ. ಮಾತ್ರವಲ್ಲದೇ ಅಲ್ಲಿನ ನಿವಾಸಿಗಳಾಗಿದ್ದ ಹಲವಾರು ಮಂದಿಗಳ ಮೇಲೆ ದೌರ್ಜನ್ಯವೆಸಗಲಾಗಿದೆ ಮತ್ತು ಅಲ್ಲಿನ ನಿವಾಸಿಗಳ ಮನೆಗಳ ಮೇಲೆ ಕಲ್ಲುತೂರಾಟ ನಡೆಸಲಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾಗಿ ವರದಿ ತಿಳಿಸಿದೆ. ಈ ನಡುವೆ ದುಷ್ಕರ್ಮಿಗಳು ಬೆನ್ನು ಹತ್ತಿದ್ದಾಗ ಕೆಲವು ಮುಸ್ಲಿಮರಿಗೆ ಹಿಂದೂ ಮನೆಗಳಲ್ಲಿ ಆಶ್ರಯ ನೀಡಿದ್ದ ಘಟನೆಯನ್ನೂ ಸ್ಮರಿಸಬೇಕಾಗಿದೆ. 

ಬಳಿಕ ಈ ಘಟನೆಯ ಕುರಿತು ಮಾತನಾಡಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, "ಇಂತಹಾ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಧ್ಯಪ್ರದೇಶವನ್ನು ಶಾಂತಿಯ ನಾಡಾಗಿಸಬೇಕೆಂದು ನಾವು ಹೊರಟಿದ್ದೇವೆ" ಎಂದಿದ್ದರು. ಇನ್ನು ಈ ಘಟನೆಯ ಕುರಿತು ಮಾತನಾಡಿದ ಅಲ್ಲಿನ ಪೊಲೀಸ್‌ ಅಧಿಕಾರಿ ಸಿದ್ದಾರ್ಥ್‌ ಚೌಧರಿ, "ಯಾವುದೇ ಶಾಂತಿ ಭಂಗ ಮಾಡಬಾರದು, ಮಸೀದಿಗಳಿಗೆ ಮತ್ತು ನಿವಾಸಿಗಳಿಗೆ ತೊಂದರೆ ನೀಡಬಾರದು ಎಂದು ಅವರಿಗೆ ನಾವು ಮೊದಲೇ ಎಚ್ಚರಿಕೆ ನೀಡಿದ್ದೆವು. ಆದರೆ ಗುಂಪು ತಮ್ಮ ಮಿತಿಯನ್ನು ಮೀರಿದಾಗ ಮತ್ತು ಮಸೀದಿಯ ಮೀನಾರದ ಮೇಲೆ ಕೇಸರಿ ಧ್ವಜ ಹಾರಿಸಿದಾಗ ಕೂಡಲೇ ನಾವು ಅದನ್ನು ತೆರವುಗೊಳಿಸಿದ್ದೇವೆ. ಈ ಕುರಿತು ಐವರನ್ನು ಬಂಧಿಸಿದ್ದು, 58ಕ್ಕೂ ಹೆಚ್ಚು ಮಂದಿಯ ಮೇಲೆ ಗ್ರಾಮಸ್ಥರ ಹೇಳಿಕೆಯ ಮುಖಾಂತರ ಪ್ರಕರಣ ದಾಖಲಿಸಲಾಗಿದೆ. ನಾವು ಇನ್ನೂ ತನಿಖೆ ನಡೆಸುತ್ತಿದ್ದೇವೆ" ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

ಈ ಕುರಿತು ಮಾತನಾಡಿದ ಮಾಲ್ವಾ ಪ್ರದೇಶದ ವಿಶ್ವ ಹಿಂದೂ ಪರಿಷತ್‌ ಮುಖ್ಯಸ್ಥ ಸೋಹನ್‌ ಜೀ ವಿಶ್ವಕರ್ಮ, "ನಾವು ಶಾಂತಿಯುತವಾಗಿಯೇ ರ್ಯಾಲಿ ನಡೆಸಿದ್ದೇವೆ. ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಬೇಕೆಂಬ ನಿಟ್ಟಿನಲ್ಲಿ ನಾವು ರ್ಯಾಲಿ ಸಂಘಟಿಸಿದ್ದೇವು. ಆದರೆ ರ್ಯಾಲಿಯ ಮಧ್ಯೆ ಯಾರೋ ಅನ್ಯರು ನುಸುಳಿಕೊಂಡಿದ್ದು, ಅವರು ಈ ಅಕ್ರಮವೆಸಗಿದ್ದಾರೆ. ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಹೇಳಿಕೆ ನೀಡಿದ್ದಾಗಿ indianexpress.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News