ಮೂಕ ಪ್ರೇಕ್ಷಕ!

Update: 2021-01-02 07:40 GMT

ಮಾನ್ಯರೇ,

ಗ್ರಾಮ ಪಂಚಾಯತ್ ಚುನಾವಣೆ ಪಕ್ಷರಹಿತವೆಂದೂ, ಮತ ಎಣಿಕೆಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮತ್ತು ಜಯಗಳಿಸಿದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸುವಂತಿಲ್ಲವೆಂಬುದು ರಾಜ್ಯ ಚುನಾವಣಾ ಆಯೋಗದ ಆದೇಶವಾಗಿತ್ತು. ಈ ಪ್ರತಿಯೊಂದನ್ನೂ ಅಕ್ಷರಶಃ ನಿರ್ಲಕ್ಷಿಸಿ, ಉಲ್ಲಂಘಿಸ ಲಾಗಿದೆ! ತಮ್ಮ ಪಕ್ಷ-ಬೆಂಬಲಿತ ಅಭ್ಯರ್ಥಿಗಳು ಶೇ.60ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿರುವುದು ಜನರ ವಿಶ್ವಾಸದ ದ್ಯೋತಕ ಮತ್ತು ಪಕ್ಷ ಗ್ರಾಮೀಣ ಭಾಗದಲ್ಲೂ ಬೇರು ಬಿಟ್ಟಿದ್ದು, ನಗರ ಪ್ರದೇಶಕ್ಕಷ್ಟೇ ಸೀಮಿತ ಎಂದು ಟೀಕಿಸುತ್ತಿದ್ದವರಿಗೆ ದಿಟ್ಟ ಉತ್ತರವೆಂದು ಒಂದು ಪಕ್ಷದ ನಾಯಕರು; ಆಸೆ, ಆಮಿಷ, ಬೆದರಿಕೆಗಳ ಮೂಲಕ ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಸೆಳೆಯುತ್ತಿದ್ದಾರೆಂದು ಮತ್ತೊಂದು ಪಕ್ಷದ ನಾಯಕರು; ರಾಷ್ಟ್ರೀಯ ಪಕ್ಷಗಳ ಹಣ, ಅಧಿಕಾರದ ಹೊರತಾಗಿಯೂ ಗಮನಾರ್ಹ ಸಾಧನೆ ಮಾಡಿರುವುದಾಗಿ ಪ್ರಾದೇಶಿಕ ಪಕ್ಷವೊಂದರ ನಾಯಕರು ಹೇಳುತ್ತಾರೆ! ಈ ತೆರೆಮರೆಯ ಪಕ್ಷ ರಾಜಕಾರಣಕ್ಕಿಂತ, ಪಕ್ಷಗಳ ಚಿಹ್ನೆಯಡಿಯಲ್ಲೇ ಚುನಾವಣೆ ನಡೆಸಬಹುದಿತ್ತಲ್ಲ! ನಿಷ್ಪಕ್ಷ, ಪಾರದರ್ಶಕ ಚುನಾವಣೆಯನ್ನು ನಡೆಸುವ ಹೊಣೆ ಹೊತ್ತ ಶಾಸನಬದ್ಧ ಸಂಸ್ಥೆಯೊಂದು ತನ್ನ ಎಲ್ಲ ನಿರ್ದೇಶನಗಳು ಉಲ್ಲಂಘನೆಯಾಗಿದ್ದರೂ ಮೂಕ ಪ್ರೇಕ್ಷಕನಂತಿರುವುದು ಎಷ್ಟು ಸರಿ?

-ತಿಪ್ಪೂರು ಪುಟ್ಟೇಗೌಡ, ಬನಶಂಕರಿ 3ನೇ ಹಂತ, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News