ಕೊರೋನ ಕೇಂದ್ರವಾದ ಚೆನ್ನೈಯ ಹೊಟೇಲ್: 15 ದಿನಗಳಲ್ಲಿ 85 ಮಂದಿಗೆ ಪಾಸಿಟಿವ್
Update: 2021-01-02 22:07 IST
ಚೆನ್ನೈ, ಜ. 1: ಇಲ್ಲಿನ ಗುಯಿಂಡಿಯಲ್ಲಿರುವ ಐಟಿಸಿ ಗ್ರಾಂಡ್ ಚೋಲಾ ಹೊಟೇಲ್‌ನಲ್ಲಿ ಕಳೆದ ಕನಿಷ್ಠ 15 ದಿನಗಳಲ್ಲಿ ಒಟ್ಟು 85 ಮಂದಿಗೆ ಕೊರೋನ ಸೋಂಕು ತಗುಲಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಚೆನ್ನೈ ನಗರಪಾಲಿಕೆಯ ಆರೋಗ್ಯ ಇಲಾಖೆಯ ಜಂಟಿ ಆಯುಕ್ತೆ ಎಸ್. ದಿವ್ಯದರ್ಶಿನಿ, ಡಿಸೆಂಬರ್ 15ರಿಂದ ಈ ಹೊಟೇಲ್‌ನ 609 ಜನರಿಗೆ ಕೊರೋನ ಸೋಂಕು ಪರೀಕ್ಷೆ ಮಾಡಲಾಗಿತ್ತು. ಇವರಲ್ಲಿ 85 ಮಂದಿಯ ಪರೀಕ್ಷೆಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ ಎಂದಿದ್ದಾರೆ. ಅಲ್ಲಿ ಜ್ವರ ತಪಾಸಣೆ ನಡೆಸುವ ಶಿಬಿರವನ್ನು ನಡೆಸಲಾಗಿದೆ. ಎಲ್ಲ ಉದ್ಯೋಗಿಗಳು ಹಾಗೂ ಅತಿಥಿಗಳು ಕೊರೋನ ಪರೀಕ್ಷೆಗೆ ಒಳಗಾಗುವಂತೆ ಸಲಹೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕೊರೋನ ಸೋಂಕಿನ ರೋಗಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಕೆಲವರು ವಿದೇಶಕ್ಕೆ ಪ್ರಯಾಣಿಸಿದ ಇತಿಹಾಸ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.