ಗಣರಾಜ್ಯೋತ್ಸವ ಪರೇಡ್‌ಗೆ ಬಾಂಗ್ಲಾದೇಶ ಸೇನೆ ಮೆರುಗು

Update: 2021-01-03 03:54 GMT
ಫೈಲ್ ಚಿತ್ರ

ಹೊಸದಿಲ್ಲಿ : ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬಾಂಗ್ಲಾದೇಶ ಸೇನೆ ಪಾಲ್ಗೊಳ್ಳಲಿರುವುದು ವಿಶೇಷ ಆಕರ್ಷಣೆಯಾಗಲಿದೆ. ದೇಶದ ಈ ಅತ್ಯಾಕರ್ಷಕ ಸಮಾರಂಭದ ವೇಳೆ ರಾಜಪಥದಲ್ಲಿ ವಿದೇಶಿ ಸೈನಿಕರು ಹೆಜ್ಜೆ ಹಾಕುವುದು ಇದು ಎರಡನೇ ಬಾರಿ ಎಂದು ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಬಾಂಗ್ಲಾದೇಶದ ಉದಯದ ಸುವರ್ಣ ಮಹೋತ್ಸವವನ್ನು ಉಭಯ ದೇಶಗಳು ಆಚರಿಸುತ್ತಿರುವ ಸಂದರ್ಭದಲ್ಲಿ ಭಾರತದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವಂತೆ ಬಾಂಗ್ಲಾದೇಶ ಸೇನೆಯ ತುಕಡಿಯನ್ನು ಆಹ್ವಾನಿಸಲಾಗಿದೆ. ಬಿಡಿ-08 ರೈಫಲ್‌ಗಳೊಂದಿಗೆ 96 ಸೈನಿಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ವರ್ಷ 10 ಸಾವಿರಕ್ಕೂ ಅಧಿಕ ಬಿಡಿ-08 ರೈಫಲ್‌ಗಳನ್ನು ಬಾಂಗ್ಲಾದೇಶದ ಆರ್ಡಿನೆನ್ಸ್ ಫ್ಯಾಕ್ಟರಿಗಳು ಉತ್ಪಾದಿಸುತ್ತವೆ.

2016ರಲ್ಲಿ ಮೊಟ್ಟಮೊದಲ ಬಾರಿಗೆ ಫ್ರಾನ್ಸ್ ಸೇನಾ ತುಕಡಿ ಭಾರತದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿತ್ತು. ಆಗ 130 ಫ್ರೆಂಚ್ ಸೈನಿಕರು ರಾಜ್‌ಪಥ್‌ನಲ್ಲಿ ಹೆಜ್ಜೆ ಹಾಕಿದ್ದರು. ಅಂದಿನ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಮುಖ್ಯ ಅತಿಥಿಯಾಗಿ ಇದನ್ನು ವೀಕ್ಷಿಸಿದ್ದರು.

ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಈ ಬಾರಿಯ ಪರೇಡ್ ಚಿಕ್ಕದಾಗಿದ್ದು, ಸಾಮಾನ್ಯವಾಗಿ ವೀಕ್ಷಿಸುವ ಪ್ರೇಕ್ಷಕರ ನಾಲ್ಕನೇ ಒಂದರಷ್ಟು ಮಂದಿಗೆ ಮಾತ್ರ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ. ಪ್ರತಿ ವರ್ಷ ಒಂದು ಲಕ್ಷ ಮಂದಿ ವೀಕ್ಷಿಸುವ ಪರೇಡ್‌ಗೆ ಈ ಬಾರಿ ಕೇವಲ 25 ಸಾವಿರ ಮಂದಿಗಷ್ಟೇ ಅವಕಾಶ ನೀಡಲಾಗುತ್ತಿದೆ. 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಈ ಬಾರಿಯ ಪರೇಡ್‌ಗೆ ಅನುಮತಿ ಇರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News