ಕೋವಿಡ್ ಲಸಿಕೆಗಳ ಬಳಕೆಗೆ ಭಾರತ ಅನುಮೋದನೆ: ವಿಶ್ವ ಆರೋಗ್ಯ ಸಂಸ್ಥೆ ಸ್ವಾಗತ

Update: 2021-01-03 14:11 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜ. 3: ಎರಡು ಕೋವಿಡ್-19 ಲಸಿಕೆಗಳ ತುರ್ತು ಬಳಕೆಗೆ ಭಾರತ ಅನುಮೋದನೆ ನೀಡಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ರವಿವಾರ ಸ್ವಾಗತಿಸಿದೆ. ಇದು ಈ ವಲಯದಲ್ಲಿ ಮಾರಕ ಸಾಂಕ್ರಾಮಿಕದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಹಾಗೂ ಬಲಪಡಿಸಲು ನೆರವು ನೀಡುತ್ತದೆ ಎಂದು ಅದು ಹೇಳಿದೆ.

ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಆ್ಯಸ್ಟ್ರಝೆನೆಕ ಔಷಧ ತಯಾರಿಕಾ ಕಂಪೆನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆ ‘ಕೋವಿಶೀಲ್ಡ್’ ಮತ್ತು ಸ್ವದೇಶಿ ಕಂಪೆನಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆ ‘ಕೋವ್ಯಾಕ್ಸಿನ್’ಗಳ ತುರ್ತು ಬಳಕೆಗೆ ಭಾರತದ ಔಷಧ ನಿಯಂತ್ರಣ ಇಲಾಖೆ ಅನುಮೋದನೆ ನೀಡಿದೆ.

ಆಕ್ಸ್‌ಫರ್ಡ್-ಆ್ಯಸ್ಟ್ರಝೆನೆಕ ಲಸಿಕೆಯನ್ನು ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಉತ್ಪಾದಿಸುತ್ತದೆ.

‘‘ಆದ್ಯತೆಯ ಅಗತ್ಯವಿರುವ ಜನರಲ್ಲಿ ಲಸಿಕೆಗಳ ಬಳಕೆಗೆ ಅನುಮೋದನೆ ನೀಡಿರುವುದು ಹಾಗೂ ಇತರ ಸಾರ್ವಜನಿಕ ಆರೋಗ್ಯ ನಿಯಮಗಳನ್ನು ಪಾಲಿಸುವುದನ್ನು ಮುಂದುವರಿಸುವುದು ಕೋವಿಡ್-19ರ ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಮಹತ್ವದ ಕ್ರಮಗಳಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಶ್ಯ ವಲಯದ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಮ್ ಖೇತ್ರಪಾಲ್ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News