ಇಂತಹ ʼಅಹಂಕಾರಿʼ ಸರಕಾರ ಅಧಿಕಾರಕ್ಕೆ ಬಂದಿರುವುದು ಇದೇ ಮೊದಲು: ಸೋನಿಯಾ ಗಾಂಧಿ
ಹೊಸದಿಲ್ಲಿ,ಜ.3: ಮೂರು ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ರೈತರ ಪ್ರತಿಭಟನೆ ಕುರಿತು ರವಿವಾರ ಕೇಂದ್ರದ ವಿರುದ್ಧ ತೀವ್ರ ದಾಳಿಯನ್ನು ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಅನ್ನದಾತರ ಸಂಕಷ್ಟಗಳನ್ನೂ ನೋಡದ ಇಷ್ಟೊಂದು ಸೊಕ್ಕಿನ ಸರಕಾರವು ಅಧಿಕಾರದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂತನ ಕೃಷಿ ಕಾನೂನುಗಳನ್ನು ತಕ್ಷಣ ಹಿಂದೆಗೆದುಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ಭಾವನೆಗಳನ್ನು ಕಡೆಗಣಿಸುವ ಸರಕಾರಗಳು ಮತ್ತು ಅವುಗಳ ನಾಯಕರು ಹೆಚ್ಚು ಸಮಯ ಅಧಿಕಾರದಲ್ಲಿರುವುದಿಲ್ಲ ಮತ್ತು ತಮ್ಮ ಆಂದೋಲನವನ್ನು ಮಟ್ಟ ಹಾಕುವ ಕೇಂದ್ರದ ಕುಟಿಲ ನೀತಿಗೆ ರೈತರು ಮಣಿಯುವುದಿಲ್ಲ ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಸೋನಿಯಾ,ಈಗಲೂ ಸಮಯಾವಕಾಶವಿದೆ. ಮೋದಿ ಸರಕಾರವು ತನ್ನ ಅಧಿಕಾರದ ಧಿಮಾಕನ್ನು ತೊರೆಯಬೇಕು, ಚಳಿ ಹಾಗೂ ಮಳೆಯಲ್ಲಿ ಸಾಯುತ್ತಿರುವ ರೈತರ ಪ್ರತಿಭಟನೆಗೆ ಅಂತ್ಯ ಹಾಡಲು ಮೂರು ಕರಾಳ ಕೃಷಿ ಕಾನೂನುಗಳನ್ನು ಬೇಷರತ್ ಆಗಿ ಹಿಂದೆಗೆದುಕೊಳ್ಳಬೇಕು. ಇದು ರಾಜಧರ್ಮವಾಗಿದೆ ಮತ್ತು ತಮ್ಮ ಪ್ರಾಣಗಳನ್ನು ಕಳೆದುಕೊಂಡಿರುವ ರೈತರಿಗೆ ನಿಜವಾದ ಗೌರವವಾಗಿದೆ ಎಂದಿದ್ದಾರೆ.
ಜನರು,ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗಳ ರಕ್ಷಣೆ ಪ್ರಜಾಪ್ರಭುತ್ವದ ಅರ್ಥವಾಗಿದೆ ಎನ್ನುವುದನ್ನು ಮೋದಿ ಸರಕಾರವು ಮರೆಯಬಾರದು ಎಂದಿರುವ ಅವರು,ಸರಕಾರದ ಜಡತೆಯಿಂದಾಗಿ ಈವರೆಗೆ 50ಕ್ಕೂ ಅಧಿಕ ರೈತರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ,ಕೆಲವರು ಆತ್ಮಹತ್ಯೆಗೂ ಮುಂದಾಗುತ್ತಿದ್ದಾರೆ. ಆದರೆ ಹೃದಯಹೀನ ಮೋದಿ ಸರಕಾರವು ತನ್ನ ಹಟವನ್ನು ಬಿಡುತ್ತಿಲ್ಲ. ಪ್ರಧಾನಿ ಅಥವಾ ಯಾವುದೇ ಸಚಿವರು ಈವರೆಗೆ ಸಾಂತ್ವನದ ಒಂದೇ ಒಂದು ಶಬ್ದವನ್ನು ಉಸುರಿಲ್ಲ. ಕೈಬೆರಳೆಣಿಕೆಯ ಕೈಗಾರಿಕೋದ್ಯಮಿಗಳಿಗೆ ಲಾಭವಾಗುವಂತೆ ನೋಡಿಕೊಳ್ಳುವುದು ಈ ಸರಕಾರದ ಮುಖ್ಯ ಅಜೆಂಡಾ ಆಗಿರುವಂತಿದೆ ಎಂದು ಆರೋಪಿಸಿದ್ದಾರೆ.